ಶಬರಿಮಲೆ ತೀರ್ಥಾಟನೆ ಕಾಸರಗೋಡು- ತಿರುವನಂತಪುರ ವಂದೇ ಭಾರತ್ ರೈಲಿಗೆ ಚೆಂಗನ್ನೂರಿನಲ್ಲೂ ನಿಲುಗಡೆ
ಕಾಸರಗೋಡು: ಶಬರಿಮಲೆ ತೀರ್ಥಾಟನಾ ಋತು ಇನ್ನೇನು ಮುಂದಿನ ತಿಂಗಳು ಆರಂಭಗೊಳ್ಳಲಿ ರುವಂತೆಯೇ ಅದನ್ನು ಗಮನದಲ್ಲಿರಿಸಿಕೊಂಡು ಶಬರಿಮಲೆ ತೀರ್ಥಾಟಕರಿಗೆ ಅನುಕೂಲಕರವಾಗು ವಂತೆ ಕಾಸರಗೋಡು- ತಿರುವನಂತಪುರ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕೋಟಯಂ ಜಿಲ್ಲೆಯ ಚೆಂಗನ್ನೂರಿನಲ್ಲಿ ನಿಲುಗಡೆ ನೀಡುವ ಮಹತ್ತರ ತೀರ್ಮಾನ ಭಾರತೀಯ ರೈಲ್ವೇ ಇಲಾಖೆ ಕೈಗೊಂಡಿದೆ.
ಈ ತೀರ್ಮಾನದಂತೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚೆಂಗನ್ನೂರಿನಲ್ಲಿ ನಿಲುಗಡೆ ನೀಡಲು ಒಪ್ಪಿಗೆ ನೀಡಲಾಗಿದೆ ಈ ಕುರಿತಾದ ಅಧಿಸೂಚನೆಯನ್ನು ದಕ್ಷಿಣ ರೈಲ್ವೇಗೆ ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ರೈಲ್ವೇ ಇಲಾಖೆ ತಿಳಿಸಿದೆ. ಕೇಂದ್ರ ಸಚಿವ ಬಿಜೆಪಿ ನಾಯಕ ವಿ. ಮುರಳೀಧರನ್ ಅವರು ಈ ಅಧಿಸೂಚನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅಧಿಸೂಚನೆ ಪ್ರಕಾರ ಚೆಂಗನ್ನೂರು ರೈಲು ನಿಲ್ದಾಣದಲ್ಲಿ ಈಗ ಪರಿಶೀಲನೆ ನಡೆಸಲಾಗುತ್ತಿದೆ. ಟಿಕೆಟ್ ಮಾರಾಟದ ಮೇಲೆ ತೀವ್ರ ನಿಗಾ ಇರಿಸಲಾಗುತ್ತಿದೆ.
ಶಬರಿಮಲೆ ಅಯ್ಯಪ್ಪ ದೇವರ ಪವಿತ್ರ ವಾಸಸ್ಥಾನವಾಗಿದೆ. ಇದು ದೇಶದ ಪ್ರಮುಖ ಹಿಂದೂ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಚೆಂಗನ್ನೂರು ರೈಲು ನಿಲ್ದಾಣವು ಪ್ರಾಥಮಿಕವಾಗಿ ಆಲಪ್ಪುಳ, ಕೊಲ್ಲಂ, ಕೋಟ್ಟಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳಿಗೂ ಅವಕಾಶ ಕಲ್ಪಿಸುತ್ತಿದೆ. ಆದ್ದರಿಂದ ವಂದೇ ಭಾರತ್ ರೈಲಿಗೆ ಚೆಂಗನ್ನೂರಿನಲ್ಲೂ ನಿಲುಗಡೆ ನೀಡುವಂತೆ ಆಗ್ರಹಿಸಿ ಸಚಿವ ಮುರಳೀಧರನ್ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ರಿಗೆ ಈ ಹಿಂದೆ ಪತ್ರ ಬರೆದಿದ್ದರು. ಅದನ್ನು ಪರಿಗಣಿಸಿ ರೈಲ್ವೇ ಸಚಿವರು ಅದಕ್ಕೆ ಒಪ್ಪಿಗೆ ನೀಡಿದ್ದಾರೆ. ಇದಕ್ಕೆ ಪ್ರಧಾನ ಮಂತ್ರಿ ಮತ್ತು ಕೇಂದ್ರ ರೈಲ್ವೇ ಸಚಿವರಿಗೆ ಸಚಿವ ಪಿ. ಮುರಳೀಧರನ್ ಧನ್ಯವಾದ ಹೇಳಿದ್ದಾರೆ. ಕೇರಳದ ಜನಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಹೊಂದಿರುವ ಕಾಳಜಿಯನ್ನು ಈ ನಿರ್ಧಾರ ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.
ಚೆಂಗನ್ನೂರು ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ವಂದೇ ಭಾರತ್ ಎಕ್ಸ್ಪ್ರೆಸ್ನ ಸಮಯದಲ್ಲೂ ಶೀಘ್ರ ಬದಲಾವಣೆ ಉಂಟಾಗಲಿದೆ. ಶಬರಿಮಲೆಯ ವಾರ್ಷಿಕ ಮಂಡಲ ಪೂಜೆ ಮತ್ತು ಮಕರಜ್ಯೋತಿ ತೀರ್ಥಾಟನಾ ಋತು ನವೆಂಬರ್ ೧೭ರಂದು ಪ್ರಾರಂಭವಾಗುತ್ತದೆ.