ಶಾಲಾ ಪಠ್ಯಪುಸ್ತಕಗಳಲ್ಲಿ ಇಂಡಿಯಾ ಬದಲಿಗೆ ಭಾರತ್ ಪದ ಬಳಕೆ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ ಕೇರಳ
ತಿರುವನಂತಪುರ: ಶಾಲಾ ಪಠ್ಯಪುಸ್ತಕಗಳಲ್ಲಿ ಇಂಡಿಯಾ ಬದಲಿಗೆ ಭಾರತ್ ಪದ ಉಲ್ಲೇಖಿಸುವ ಪ್ರಸ್ತಾವಕ್ಕೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಅನುಮೋದನೆ ನೀಡಿರುವಂತೆಯೇ ಕೇರಳ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ರಂಗಕ್ಕಿಳಿದಿದೆ.
ಇದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ರಾಜಕೀಯ ತಂತ್ರವಾ ಗಿದೆ. ರಾಜಕೀಯ ಉದ್ದೇಶದಿಂದಲೇ ಕೇಂದ್ರ ಸರಕಾರ ಇಂತಹ ಪ್ರಸ್ತಾಪ ನಡೆಸಿದೆ. ಅದನ್ನು ಕೇರಳದಲ್ಲಿ ಜ್ಯಾರಿಗೊಳಿಸದೆ ಇಂಡಿಯಾ ಪದವನ್ನು ಉಳಿಸಿಕೊಂಡೇ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ತನ್ನ ಸ್ವಂತ ನೆಲೆಗೆ ಮುದ್ರಿಸಿ ಬಳಸುವ ಚಿಂತನೆಯಲ್ಲಿ ಕೇರಳ ಸರಕಾರ ಈಗ ತೊಡಗಿದೆ. ಪಠ್ಯಪುಸ್ತಕಗಳಲ್ಲಿ ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸುವುದು ಮಾತ್ರವಲ್ಲ ಪ್ರಾಚೀನ ಭಾರತ ಬದಲಿಗೆ ಶಾಸ್ತ್ರೀಯ ಇತಿಹಾಸ ನಾಮಕರಣವನ್ನು ಅಳವಡಿಸಿಕೊಳ್ಳಲು ಸಿಐ ಐಸಾಕ್ ಅಧ್ಯಕ್ಷರಾಗಿರುವ ನೇಶನಲ್ ಕೌನ್ಸಿಲ್ ಆಫ್ ಎಜ್ಯುಕೇಶನಲ್ ರಿಸರ್ಚ್ ಆಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ಸಮಿತಿ ಶಿಫಾರಸ್ಸು ಮಾಡಿದೆ. ಎಲ್ಲಾ ವಿಷಯಗಳ ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ (ಇಂಡಿಯನ್ ನೋಲೇಜ್ ಸಿಸ್ಟಂ (ಐಕೆಎಸ್) ಅಳವಡಿಸುವ ಪ್ರಸ್ತಾಪವನ್ನು ಸಮಿತಿ ಮುಂದಿರಿಸಿದೆ.