ಶಾಲೆಗೆ ಹೋಗುವ ದಾರಿ ಮಧ್ಯೆ ಕಾಡು ಹಂದಿ ದಾಳಿ: ೮ರ ಹರೆಯದ ಬಾಲಕನಿಗೆ ಗಾಯ

ಬೋವಿಕ್ಕಾನ: ಶಾಲೆಗೆ ಹೋಗುವ ದಾರಿ ಮಧ್ಯೆ ಕಾಡು ಹಂದಿಯೊಂದು ದಾಳಿ ನಡೆಸಿ ಎಂಟರ ಹರೆಯದ ಬಾಲಕ ಗಾಯಗೊಂಡ ಘಟನೆ ನಡೆದಿದೆ.

ಬೋವಿಕ್ಕಾನ ಮುದಲಪ್ಪಾರದ ಸಾಬೀತ್ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ  ವಾಸಿಸುತ್ತಿರುವ ಮುಹಮ್ಮದ್ ಸಕೀಬ್- ಹಾಜಿರಾ ದಂಪತಿ ಪುತ್ರ ಮುಂಡಕೈ ಸರಕಾರಿ ಎಲ್‌ಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಸಯ್ಯಿದ್ ಹೈದರಲಿ (೮) ಗಾಯಗೊಂಡ ಬಾಲಕ. ಆತನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ.

ಈ ಬಾಲಕ ನಿನ್ನೆ ಬೆಳಿಗ್ಗೆ ತನ್ನ ಸಹೋದರ ಮುಹಮ್ಮದ್ ಶಾಸ್‌ನೊಂದಿಗೆ ಶಾಲೆಗೆ ಹೋಗುತ್ತಿದ್ದಾಗ ಅಲ್ಲೇ ಪೊದೆಯೊಂದರಲ್ಲಿ ಅಡಗಿ ನಿಂತಿದ್ದ ಕಾಡು ಹಂದಿಯೊಂದು ದಿಢೀರ್ ಆಗಿ ದಾಳಿ ನಡೆಸಿದೆ. ಆ ವೇಳೆ ಬಾಲಕನ ಬೊಬ್ಬೆ ಕೇಳಿದಾಗ ಪಕ್ಕದವರು ಅಲ್ಲಿಗೆ ಓಡಿ ಬಂದಾಗ ಕಾಡು ಹಂದಿ ಕಣ್ಮರೆಯಾಗಿತ್ತು. ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

ಈ ಪ್ರದೇಶದಲ್ಲಿ ಕಾಡು ಹಂದಿಗಳ ಉಪಟಳ ಇತ್ತೀಚೆಗಿನಿಂದ ಇನ್ನಷ್ಟು ತೀವ್ರಗೊಳ್ಳತೊಡಗಿದೆ. ಶಾಲೆಗಳು ಮಾತ್ರವಲ್ಲ ಬೆಳಿಗ್ಗೆ ಮದ್ರಸಾಕ್ಕೆ ಹೋಗುವ ಮಕ್ಕಳು ಹಾಗೂ ಅವರ ಮನೆಯವರೂ ಇದರಿಂದ ಭೀತಿ ಎದುರಿಸುತ್ತಿದ್ದಾರೆ ಎಂದು ಶಾಲಾ ಅಧ್ಯಾಪಕರು ಮತ್ತು ಊರವರು ಕಳವಳ ವ್ಯಕ್ತಪಡಿಸತೊಡಗಿದ್ದಾರೆ.

ಜನರ ಮೇಲೆ ದಾಳಿ ಮಾತ್ರವಲ್ಲ ಈ ಪ್ರದೇಶದ ಕೃಷಿ ತೋಟಗಳಿಗೂ ನುಗ್ಗಿ ಕಾಡು ಹಂದಿ ವ್ಯಾಪಕ ನಾಶನಷ್ಟ ಉಂಟುಮಾಡುತ್ತಿದೆ.

ಅಕ್ರಮಕಾರಿ ಕಾಡು ಹಂದಿಗಳನ್ನು ಗುಂಡಿಕ್ಕಿ ಕೊಲ್ಲಲು ರಾಜ್ಯ ಸರಕಾರ ಸಂಬಂಧಪಟ್ಟ ಪಂಚಾಯತ್‌ಗಳಿಗೆ ಅಧಿಕಾರ ನೀಡಿ ಆದೇಶ ಹೊರಡಿಸಿ ಒಂದು ವರ್ಷ ಕಳೆದರೂ ಅದನ್ನು ಇನ್ನೂ ಉಪಯೋಗ ಪಡಿಸಲಾಗುತ್ತಿಲ್ಲವೆಂದು ಇನ್ನೊಂದೆಡೆ ಅರಣ್ಯ ಅಧಿಕಾರಿಗಳು ಹೇಳುತ್ತಿದ್ದಾರೆ. ಪಂಚಾಯತ್‌ನಿಂದ ಅನುಮತಿ ಲಭಿಸಿದಲ್ಲಿ ಮಾತ್ರವೇ  ಕಾಡು ಹಂದಿಗಳನ್ನು ಗುಂಡಿಕ್ಕಿ ಕೊಲ್ಲಬಹುದೆಂದೂ ಅವರು ತಿಳಿಸಿದ್ದಾರೆ. ಜನರಿಗೆ ಬೆದರಿಕೆ ಒಡ್ಡುತ್ತಿರುವ ಕಾಡು ಹಂದಿಗಳನ್ನು ಕೊಲ್ಲಲು ಅಗತ್ಯದ ಕ್ರಮ ಕೈಗೊಳ್ಳಲಾಗುವುದೆಂದೂ ಪಂಚಾಯತ್ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page