ಸಚಿತಾ ರೈ ವಿರುದ್ಧ ಮತ್ತಷ್ಟು ಪ್ರಕರಣಗಳು ಬಹಿರಂಗ: ಬದಿಯಡ್ಕ ಠಾಣೆಯಲ್ಲಿ ನಿನ್ನೆ ಒಂದು ಕೇಸು ದಾಖಲು
ಕಾಸರಗೋಡು: ಕೇಂದ್ರ, ರಾಜ್ಯ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸುವುದಾಗಿ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದು ವಂಚಿಸಿದ ಅಧ್ಯಾಪಿಕೆ, ಡಿವೈಎಫ್‌ಐ ಮಾಜಿ ನೇತಾರೆ, ಶೇಣಿ ಬಲ್ತಕಲ್ಲುವಿನ ಸಚಿತಾ ರೈ (27)ಯ ವಿರುದ್ಧ ಮತ್ತಷ್ಟು ಪ್ರಕರಣಗಳು ಬಹಿರಂಗಗೊಳ್ಳುತ್ತಿವೆ. ನಿನ್ನೆ ಪಳ್ಳತ್ತಡ್ಕ ನೆಲ್ಲಿಕಳಯ ನಿವಾಸಿ ಅರವಿಂದಾ ಕ್ಷನ್ ಎಂಬವರ ಪುತ್ರಿ ಅಮೃತ (28) ನೀಡಿದ ದೂರಿನಂತೆ ಬದಿಯಡ್ಕ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದೆ. ಸಿಪಿಸಿಆರ್‌ಐಯಲ್ಲಿ ಕೆಲಸ ದೊರಕಿಸಿಕೊಡುವ ಭರವಸೆ ನೀಡಿ ಅಮೃತರಿಂದ 12 ಲಕ್ಷದ 71000 ರೂ. ವಶಪಡಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. 2023 ಜನವರಿ 10ರಿಂದ ಇದೇ ವರ್ಷ ಮೇ 11ರ ಮಧ್ಯೆ ಈ ಮೊತ್ತವನ್ನು ಪಡೆದಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ. ಆದರೆ ಆ ಬಳಿಕ ಕೆಲಸ ದೊರಕಿಸದೆ ಹಣವನ್ನೂ ಹಿಂತಿರುಗಿಸದೆ ವಂಚಿಸಿರುವುದಾಗಿ ಆರೋಪಿಸಲಾಗಿದೆ. ಒಟ್ಟು ಈಗ ವಿವಿಧ ಠಾಣೆಗಳಲ್ಲಿ ಈಕೆಯ ವಿರುದ್ಧ 13 ಪ್ರಕರಣಗಳು ದಾಖಲಾಗಿದ್ದು, ಈಕೆಯನ್ನು ಈಗ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ರಿಸಲಾಗಿದೆ. ಸಚಿತಾ ರೈ ಕಾಸರಗೋಡು ನ್ಯಾಯಾಲಯದಲ್ಲಿ ಹಾಜರಾಗಲು ಬರುತ್ತಿದ್ದಂತೆ ವಿದ್ಯಾನಗರದಲ್ಲಿ ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಸೆರೆ ಹಿಡಿದಿತ್ತು. ಬಳಿಕ ಕುಂಬಳೆ ಪೊಲೀಸರು ತಲುಪಿ ಸಚಿತಾಳನ್ನು ಕುಂಬಳೆ ಠಾಣೆಗೆ ಕರೆದೊಯ್ದರು. ಹೊಸತಾಗಿ ದಾಖಲಾದ ದೂರಿನ ಆಧಾರದಲ್ಲಿ ಸಚಿತಾಳನ್ನು ಠಾಣೆಗೆ ಕರೆದುಕೊಂಡು ಬಂದು ಬಂಧನ ದಾಖಲಿಸಲಾಗಿದೆ. ಉಳಿದ ಪ್ರಕರಣಗಳಲ್ಲಿ ವಿವಿಧ ಠಾಣೆಗಳಲ್ಲಿ ಈಕೆಯ ಬಂಧನ ದಾಖಲಾದ ಬಳಿಕ ಕುಂಬಳೆ ಪೊಲೀಸರು ಕಸ್ಟಡಿಗೆ ತೆಗೆಯಲು ತೀರ್ಮಾನಿಸಿದ್ದಾರೆ. ಬಳಿಕ ಠಾಣೆಗೆ ಕರೆತಂದು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ತೀರ್ಮಾನಿಸಿದ್ದಾರೆ.