ಸಚಿವ ಸಂಪುಟ ಪುನರ್ರಚನೆ ಅಂತಿಮ ತೀರ್ಮಾನ ಇಂದು ಸಂಜೆ
ತಿರುವನಂತಪುರ: ರಾಜ್ಯ ಸಚಿವ ಸಂಪುಟ ಪುನರ್ರಚನೆ ಕುರಿತಾದ ಅಂತಿಮ ತೀರ್ಮಾನ ಇಂದು ಸಂಜೆ ಉಂಟಾಗಲಿದೆ.
ಎಡರಂಗ ರಾಜ್ಯ ಸಮಿತಿ ಸಭೆ ಇಂದು ಸಂಜೆ ೪ ಗಂಟೆಗೆ ತಿರುವನಂತಪುರದಲ್ಲಿ ಕರೆಯಲಾಗಿದ್ದು, ಅದರಲ್ಲಿ ಈ ತೀರ್ಮಾನ ಉಂಟಾಗುವ ಸಾಧ್ಯತೆ ಇದೆ. ಮಾತ್ರವಲ್ಲ, ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸಭೆ ಕೂಡಾ ಇಂದು ಸಂಜೆ ಇನ್ನೊಂದೆಡೆ ನಡೆಯಲಿದೆ. ಮುಖ್ಯಮಂತ್ರಿಯ ನೇತೃತ್ವದಲ್ಲಿ ನವೆಂಬರ್ ೧೮ರಂದು ಆರಂಭಗೊಳ್ಳಲಿರುವ ನವಕೇರಳ ಸದಸ್ ಕಾರ್ಯಕ್ರಮ ಸಮಾಪ್ತಿಗೊಂಡ ಬಳಿಕವಷ್ಟೇ ಸಚಿವ ಸಂಪುಟದ ಪುನರ್ ರಚನೆ ನಡೆಯಲಿದೆ. ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಸರಕಾರ ಅಧಿಕಾರಕ್ಕೇರುವ ವೇಳೆ ಮಾಡಿಕೊಳ್ಳಲಾದ ಒಪ್ಪಂದ ಪ್ರಕಾರದ ಸಚಿವ ಸಂಪುಟದ ಪುನರ್ರಚನೆ ನವೆಂಬರ್ ೨೫ರಂದು ನಡೆಯಬೇಕಾಗಿದೆ. ಇದರಂತೆ ಸಚಿವರಾಗಿ ಎರಡೂವರೆ ವರ್ಷ ಪೂರೈಸಿರುವ ಸಾರಿಗೆ ಸಚಿವ ಆಂಟನಿ ರಾಜು ಮತ್ತು ಅಹಮ್ಮದ್ ದೇವರ್ ಕೋವಿಲ್ ತಮ್ಮ ಸಚಿವಸ್ಥಾನ ತೆರವುಗೊಳಿಸಿ ಅವರ ಪರ್ಯಾಯವಾಗಿ ಕೇರಳ ಕಾಂಗ್ರೆಸ್ (ಬಿ) ಕೆ.ಬಿ. ಗಣೇಶ್ ಕುಮಾರ್ ಮತ್ತು ಕಾಂಗ್ರೆಸ್ ಎಸ್ ನೇತಾರ ಕಡನ್ನಪ್ಪಳ್ಳಿ ರಾಮಚಂದ್ರನ್ರಿಗೆ ಸಚಿವ ಸ್ಥಾನ ವಹಿಸಿಕೊಡಬೇಕಾಗಿದೆ. ತಮಗೆ ಸಚಿವಸ್ಥಾನ ನೀಡುವಂತೆ ಕೇರಳ ಕಾಂಗ್ರೆಸ್ (ಬಿ) ಈಗಾಗಲೇ ಆಗ್ರಹಪಟ್ಟಿದೆ. ಈ ಪಕ್ಷದ ಶಾಸಕ ಕೆ.ಬಿ. ಗಣೇಶ್ ಕುಮಾರ್ರ ವಿರುದ್ಧ ಇರುವ ಪ್ರಕರಣ ಅವರು ಸಚಿವರಾಗುವುದಕ್ಕೆ ಅಡ್ಡಿಯಾಗದೆಂದು ಎಡರಂಗ ರಾಜ್ಯ ಸಂಚಾಲಕ ಇ.ಪಿ. ಜಯರಾಜನ್ ಇಂದು ಬೆಳಿಗ್ಗೆ ಸ್ಪಷ್ಟಪಡಿಸಿದ್ದಾರೆ.