ಸತ್ಯನಾರಾಯಣ ಬೆಳೇರಿಗೆ ಪದ್ಮಶ್ರೀ: ನಾಡಿನಲ್ಲಿ ಸಂತಸ; ಹರಿದುಬರತೊಡಗಿದ ಅಭಿನಂದನೆಗಳ ಮಹಾಪೂರ
ಮುಳ್ಳೇರಿಯ: ಭತ್ತದ ತಳಿ ಸಂರಕ್ಷಣೆ ಹಾಗೂ ಸಂವರ್ಧನೆಯಲ್ಲಿ ನಡೆಸಿದ ಅತ್ಯುತ್ತಮ ಸಾಧನೆಗಾಗಿ ೨೦೨೪ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡ ಬೆಳ್ಳೂರು ಪಂಚಾಯತ್ನ ನೆಟ್ಟಣಿಗೆ ಗ್ರಾಮದ ಸತ್ಯನಾರಾಯಣ ಬೆಳೇರಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಜಿಲ್ಲೆಯ ಕೃಷಿಕನೋರ್ವರಿಗೆ ಇದೇ ಮೊದಲ ಬಾರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ನಾಡಿನಲ್ಲಿ ಭಾರೀ ಸಂತಸ ಮೂಡಿಸಿದೆ. ಕಳೆದ ಹಲವು ವರ್ಷಗಳಿಂದ ಮರೆಯಾಗುತ್ತಿರುವ ದೇಸಿ ಭತ್ತದ ತಳಿಗಳ ಸಂರಕ್ಷಣೆ ಹಾಗೂ ಅವುಗ ಸಂವರ್ಧನೆಯ ಮೂಲಕ ಸತ್ಯನಾರಾಯಣ ಬೆಳೇರಿ ಅವರು ಉತ್ತಮ ಸಾಧನೆಗೈದುದನ್ನು ಪರಿಗಣಿಸಿ ಕೇಂದ್ರ ಸರಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.
ಇದುವರೆಗೆ ೬೫೦ರಷ್ಟು ಭತ್ತದ ತಳಿಗಳನ್ನು ಸತ್ಯನಾರಾಯಣ ಬೆಳೇರಿ ಅವರು ಸಂರಕ್ಷಿಸಿಕೊಂಡು ಬಂದಿದ್ದಾರೆ. ವಿವಿಧ ರಾಜ್ಯಗಳ ಹಾಗೂ ವಿದೇಶಗಳ ಭತ್ತದ ತಳಿಗಳನ್ನು ಇವರು ಸಂರಕ್ಷಿಸಿಕೊಂಡು ಬಂದಿದ್ದಾರೆ. ಇದರಲ್ಲಿ ೨೦೦ಕ್ಕೂ ಹೆಚ್ಚು ಭತ್ತದ ತಳಿಗಳು ಅಪೂರ್ವವಾದವುಗಳಾಗಿವೆ. ಕುಟ್ಟನಾಡು, ವಯನಾಡ್, ಪಟ್ಟಾಂಬಿ ಸಹಿತ ಕೇರಳದ ಭತ್ತದ ಬಯಲುಗಳು ಹಾಗೂ ಕರ್ನಾಟಕ, ರಾಜಸ್ಥಾನ ಸಹಿತ ರಾಜ್ಯಗಳಲ್ಲಿ ಸಂಚರಿಸಿ ಇವರು ಭತ್ತದ ತಳಿಗಳನ್ನು ಸಂಗ್ರಹಿ ಸಿಕೊಂಡಿದ್ದಾರೆ. ದಶಕಗಳ ಹಿಂದೆ ಚೇರ್ಕಾಡಿ ರಾಮಚಂದ್ರರಾಯರು ನೀಡಿದ ಒಂದು ಮುಷ್ಠಿಯಷ್ಟು ‘ರಾಜಕಯಮೆ’ ಎಂಬ ದೇಸಿ ಭತ್ತದ ತಳಿಯೊಂದಿಗೆ ಆರಂಭವಾದ ಇವರ ಈ ಕಾಯಕ ಪ್ರಸ್ತುತ ೬೫೦ರಷ್ಟು ತಳಿಗಳ ಸಂರಕ್ಷಣೆವರೆಗೆ ತಲುಪಿದೆ. ರಾಜಕಯಮೆ, ಗಂಧಸಾಲೆ, ಅತಿಕಾರ, ಸುಗ್ಗಿ ಕಯಮೆ, ನವರ, ಮೈಸೂರು ರಾಜರು ಬಳಸುತ್ತಿದ್ದ ರಾಜಮುಡಿ, ರಾಜಭೋಗ, ಉಪ್ಪುನೀರಲ್ಲೂ ಬೆಳೆಯುವ ಕಗ್ಗ, ಬರನಿರೋಧಕ ಪುಟ್ಟ ಭತ್ತ, ಅವಲಕ್ಕಿಗೆ ಬೇಕಾದ ಸ್ವರಬಾ, ಫಿಲಿಪೈನ್ ದೇಶದ ಮನಿಲಾ, ಸುಶ್ರುತನ ಕಾಲದ ಕಳಮೆ, ಬುದ್ಧನ ಕಾಲದ ಕಲಾ ನಾಮಕ್, ನೇರಳೆ ಬಣ್ಣದ ಡಾಂಬಾರ್ಕಾಳ, ಕಾರ್ರೆಡ್ ರೈಲ್, ಕಲಾಬತಿ, ನಜರ್ಬಾತ್ ಅಲ್ಲದೆ ಕೇರಳ, ಕರ್ನಾಟಕ, ತಮಿಳುನಾಡು, ಮಣಿಪುರ, ಆಂಧ್ರಪ್ರದೇಶ, ಮಹಾರಾಷ್ಟ್ರ, ಒಡಿಶಾ ಸೇರಿದಂತೆ ಭಾರತದ ಹೆಚ್ಚಿನೆಲ್ಲಾ ರಾಜ್ಯಗಳ ಭತ್ತದ ತಳಿಗಳ ಸಂಗ್ರಹ ಸತ್ಯನಾರಾಯಣರಲ್ಲಿದೆ.
ಸ್ಥಳೀಯ ಬೀಜ ವೈವಿಧ್ಯವನ್ನು ಸಂರಕ್ಷಿಸುವ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಕೇಂದ್ರ ಕೃಷಿ ಇಲಾಖೆ ನೀಡುವ ಪ್ಲಾಂಟ್ ಜಿನೋಮ್ ಸೇವಿಯರ್ ಫಾರ್ಮರಿ ವಾರ್ಡ್ ಎಂಬ ರಾಷ್ಟ್ರೀಯ ಪುರಸ್ಕಾರ ಇವರಿಗೆ ಈ ಹಿಂದೆ ಲಭಿಸಿತ್ತು. ಕೇಂದ್ರ ಕೃಷಿ ಸಚಿವರು ೨೦೨೧ ನವಂಬರ್ ೧೧ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ, ಪ್ರಮಾಣಪತ್ರ ನೀಡಿ ಸನ್ಮಾನಿಸಿದ್ದರು. ಭತ್ತ ತಳಿ ಸಂಗ್ರಹದ ಜತೆಗೆ ಕಸಿ ಕಟ್ಟುವಿಕೆ, ಜೇನು ಸಾಕಣಿಕೆ ಮೊದಲಾದವುಗಳಲ್ಲೂ ಇವರು ನುರಿತರಾಗಿದ್ದಾರೆ.