ಸಮುದ್ರದಲ್ಲಿ ಬಲೆಗೆ ಸಿಲುಕಿಕೊಂಡ ವಿಚಿತ್ರ ಕಂಟೈನರ್: ಬೆಚ್ಚಿಬಿದ್ದ ಬೆಸ್ತರು
ಕಾಸರಗೋಡು: ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಬಲೆಗೆ ವಿಚಿತ್ರ ಕಂಟೈನರ್ ಒಂದು ಸಿಲುಕಿಕೊಂಡು ಅದು ಬೆಸ್ತರನ್ನು ಬೆಚ್ಚಿ ಬೀಳಿಸಿದ ಘಟನೆ ನಡೆದಿದೆ.
ಮೊಗ್ರಾಲ್ ಪುತ್ತೂರು ಕಾಸ ರಗೋಡು ಬೀಚ್ ನಡುವಿನ ಸಮುದ್ರದಲ್ಲಿ ಮೊನ್ನೆ ಸಂಜೆ ಮೀನುಗಾರರು ಬೀಸಿದ ಬಲೆಗೆ ಈ ಸಿಲಿಂಡರ್ ಸಿಲುಕಿಕೊಂಡಿದೆ. ಅದನ್ನು ಕಂಡು ಹೆದರಿದ ಬೆಸ್ತರು ತಕ್ಷಣ ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಬಾಂಬ್ ನಿಷ್ಕ್ರಿಯ ಸ್ಕ್ವಾಡ್ನ ಸಹಿತ ಸ್ಥಳಕ್ಕೆ ಆಗಮಿಸಿ ಬಾಂಬ್ ಸ್ಕ್ವಾಡ್ನ ಸಹಾಯದೊಂದಿಗೆ ಪರಿಶೀಲಿಸಿದಾಗ ಅದು ಬಾಂಬ್ ಅಲ್ಲ ಬದಲಾಗಿ ಗ್ಯಾಸ್ ಕಂಟೈನರ್ ಆಗಿತ್ತೆಂಬುದು ಖಚಿತಪಡಿಸಿದ್ದಾರೆ. ಆಗಲಷ್ಟೇ ಬೆಸ್ತರಲ್ಲಿ ಆವರಿಸಿದ್ದ ಭಯ ನಿವಾರಣೆಯಾಗಿದೆ.
ಈ ಕಂಟೈನರ್ನಲ್ಲಿ ಚೀನೀ ಭಾಷೆಯ ಬರಹವನ್ನು ಮುದ್ರಿಸಲಾಗಿತ್ತು. ಅದುವೇ ಭಯ ಉಂಟಾಗಲು ಪ್ರಧಾನ ಕಾರಣವಾಗಿದೆ. ಹಡಗಿನ ಫ್ರಿಡ್ಜ್ನಲ್ಲಿ ಅಳವಡಿಸಲಾಗುವ ಗ್ಯಾಸ್ ಕಂಟೈನರ್ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅದನ್ನು ಪೊಲೀಸರು ಠಾಣೆಗೆ ಸಾಗಿಸಿದರು.