ಸರ ಕಳ್ಳನೆಂದು ಆರೋಪಿಸಿ ಪೊಲೀಸರು ಕಸ್ಟಡಿಗೆ ತೆಗೆದ ಯುವಕನಿಗೆ ಹಲ್ಲೆ -ದೂರು
ಚೆರ್ಕಳ: ಸರಕಳ್ಳನೆಂದು ಆರೋಪಿಸಿ ಪೊಲೀಸರು ಕಸ್ಟಡಿಗೆ ತೆಗೆದ ಯುವಕನಿಗೆ ಪೊಲೀಸ್ ಚಾಲಕ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಕಲ್ಲಕಟ್ಟ ನಿವಾಸಿ ಅಭಿಲಾಷ್ (೨೬)ಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಗಾಯಗೊಂಡ ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸೋಮವಾರ ಸಂಜೆ ಎದುರ್ತೋಡ್‌ನಲ್ಲಿ ಘಟನೆ ನಡೆದಿದೆ. ಅಭಿಲಾಷ್ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರೆನ್ನಲಾಗಿದೆ. ಬಳಿಕ ಪೊಲೀಸ್ ಚಾಲಕ ಹಲ್ಲೆಗೈದಿದ್ದು, ಇದರಿಂದ ಅಸ್ವಸ್ಥಗೊಂಡು ರಸ್ತೆ ಬದಿ ಬಿದ್ದಿದ್ದಾಗ ಮತ್ತೆಯೂ ಹಲ್ಲೆಗೈದಿರುವುದಾಗಿ ಅಭಿಲಾಷ್ ದೂರಿದ್ದಾರೆ. ಬಳಿಕ ಪೊಲೀಸ್ ಜೀಪಿನಲ್ಲಿ ಚೆಂಗಳ ಇ.ಕೆ. ನಾಯನಾರ್ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಠಾಣೆಗೆ ಕರೆದೊಯ್ದು ಕೆಲವು ದಾಖಲೆಗಳಿಗೆ ಸಹಿ ಹಾಕಿಸಿದ ಬಳಿಕ ಆಟೋ ರಿಕ್ಷಾದಲ್ಲಿ ಕೊಂಡೊಯ್ದು ಮನೆಗೆ ತಲುಪಿಸಿರುವುದಾಗಿ ದೂರಲಾಗಿದೆ. ಭಾರೀ ನೋವು ಅನುಭವಗೊಂಡ ಅಭಿಲಾಷ್ ಬಳಿಕ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪೊಲೀಸರ ವಿರುದ್ಧ ಮಾನವಹಕ್ಕು ಆಯೋಗ, ಡಿಜಿಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಿರುವುದಾಗಿ ತಿಳಿಸಲಾಗಿದೆ.