ಸಾಲ ಮರು ಪಾವತಿಸಬೇಕಾದ ಕೊನೆಯ ತಾರೀಕು ಆದಿತ್ಯವಾರ: ಒಂದು ದಿನ ತಡವಾಗಿ ಸಾಲ ಮೊತ್ತ ಪಡೆಯಲು ನಿರಾಕರಣೆ; ಬ್ಯಾಂಕ್ ವಿರುದ್ಧ ತೀರ್ಪು

ಕಾಸರಗೋಡು: ಬ್ಯಾಂಕ್‌ನಿಂದ ಪಡೆದ ಸಾಲದ ಮೊತ್ತವನ್ನು ಮರುಪಾವತಿಸಲಿರುವ ಕೊನೆಯ ತಾರೀಕು ಆದಿತ್ಯವಾರವಾದ ಹಿನ್ನೆಲೆಯಲ್ಲಿ ಅದರ ಮರುದಿನ ಮೊತ್ತ ಪಾವತಿಸಲು ತೆರಳಿದ ಸಾಲಗಾರನಿಂದ ಹಣ ಪಡೆದುಕೊಳ್ಳಲು ಬ್ಯಾಂಕ್ ಅಧಿಕಾರಿಗಳು ಸಿದ್ಧರಾಗಲಿಲ್ಲವೆನ್ನಲಾಗಿದೆ. ಇದರಿಂದಾಗಿ ಸಾಲಗಾರನಿಗೆ  ಕೇಂದ್ರ ಸಬ್ಸಿಡಿ ನಷ್ಟಗೊಂಡಿತೆಂಬ ದೂರಿನಂತೆ ಸಾಲಗಾರನಿಗೆ ಅನುಕೂಲವಾಗಿ ಜಿಲ್ಲಾ ಗ್ರಾಹಕರ ತರ್ಕ ಪರಿಹಾರ ಆಯೋಗ ತೀರ್ಪು ನೀಡಿದೆ.

ಒಂದು ದಿನ ತಡವಾದ ಹಿನ್ನೆಲೆಯಲ್ಲಿ  ಸಾಲದ ಮೊತ್ತ ಪಡೆಯಲಿಲ್ಲವೆಂಬ ಆರೋಪದಂತೆ ಬ್ಯಾಂಕ್ ೧೦,೦೦೦ ರೂಪಾಯಿ ನಷ್ಟ ಪರಿಹಾರ ಹಾಗೂ ೫೦೦೦ ರೂಪಾಯಿ ನ್ಯಾಯಾಲಯದ ಖರ್ಚು ನೀಡಬೇಕೆಂಬುವುದಾಗಿ ತೀರ್ಪು ನೀಡಲಾಗಿದೆ. ಪೆರುಂಬಳ ಆರ್ಲೋಟ್ಟಿ ಹೌಸ್‌ನ ಪಿ.ಚಾತುಕುಟ್ಟಿ ನಾಯರ್ ನೀಡಿದ ದೂರಿನಂತೆ ಕೇರಳ ಗ್ರಾಮೀಣ ಬ್ಯಾಂಕ್ ವಿರುದ್ಧ ಜಿಲ್ಲಾ ಗ್ರಾಹಕರ ತರ್ಕ ಪರಿಹಾರ ಆಯೋಗದ  ಅಧ್ಯಕ್ಷ ಕೆ.ಕೃಷ್ಣನ್, ಸದಸ್ಯ ಕೆ.ಜಿ. ಬೀನ ಎಂಬಿವರು ಈ ತೀರ್ಪು ನೀಡಿದ್ದಾರೆ.

ಚಾತುಕುಟ್ಟಿ ನಾಯರ್ ಕೃಷಿ ಅಗತ್ಯಕ್ಕಾಗಿ ೨೦೧೬ ಸೆಪ್ಟಂಬರ್ ೩ರಂದು ಬ್ಯಾಂಕ್‌ನಿಂದ ೧ ಲಕ್ಷರೂಪಾಯಿ  ಸಾಲ ಪಡೆದಿದ್ದರೆನ್ನಲಾಗಿದೆ. ಪ್ರತೀ ವರ್ಷ ನವೀಕರಿಸುವ ಈ ಸಾಲಕ್ಕೆ ಕೇಂದ್ರ ಸರಕಾರದ ಸಬ್ಸಿಡಿ ಲಭಿಸುತ್ತದೆ. ಪಡೆದ ಸಾಲದ ಕೊನೆಯ ಕಂತು ಪಾವತಿಸಬೇಕಾದ ಕೊನೆಯ ದಿನ ೨೦೧೯ ಸೆಪ್ಟಂಬರ್ ೧ ಆಗಿತ್ತು. ಆದರೆ ಈ ದಿನ ಆದಿತ್ಯವಾರವಾದುದರಿಂದ ೨ರಂದು  ಸೋಮವಾರ  ಬ್ಯಾಂಕ್‌ಗೆ ತೆರಳಿ ಹಣ ಪಾವತಿಸಲು ಮುಂದಾದರೂ   ಅಧಿಕಾರಿಗಳು ಪಡೆದಿಲ್ಲವೆಂದು ದೂರಲಾಗಿದೆ. ಇದರಿಂದ  ಆ ಮೊತ್ತವನ್ನು ಬ್ಯಾಂಕ್‌ನ ಸೇವಿಂಗ್ ಅಕೌಂಟ್‌ನಲ್ಲಿ ಠೇವಣಿಯಿರಿಸಲಾಯಿತು.

ಸಾಲದ ಮೊತ್ತ ಸಮಯಕ್ಕೆ ಸರಿಯಾಗಿ ಪಾವತಿಸಿದುದಕ್ಕೆ ಇನ್ಸೆಂಟಿವ್ ನೀಡಿಲ್ಲವೆಂದೂ  ಸಾಲದ ಮೊತ್ತ ನಿಗದಿತ ತಾರೀಖಿನಂದು ಸ್ವೀಕರಿಸದಿರುವುದರಿಂದ ೪೦೦ ರೂಪಾಯಿ ನಷ್ಟಗೊಂಡಿರುವುದಾಗಿ ದೂರಲಾಗಿದೆ. ಆದರೆ ದೂರುಗಾರ ಅಗತ್ಯದ ದಾಖಲೆಗಳನ್ನು ಹಾಜರುಪಡಿಸಿಲ್ಲವೆಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page