ಸಿಪಿಎಂ ಕಾರ್ಯಕರ್ತನ ಮನೆಗೆ ದಾಳಿ ಪ್ರಕರಣ: ಆರೋಪಿಗಳಾದ ಕಾಂಗ್ರೆಸ್ ಕಾರ್ಯಕರ್ತರ ಖುಲಾಸೆ
ಕಾಸರಗೋಡು: ಪೆರಿಯಾದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‌ಲಾಲ್ ಮತ್ತು ಕೃಪೇಶ್‌ರ ಕೊಲೆ ಗೈದ ಘಟನೆ ಬಳಿಕ ಭುಗಿಲೆದ್ದ ಗಲಭೆಯಲ್ಲಿ ಅಲ್ಲಿನ ಸಿಪಿಎಂ ಕಾರ್ಯಕರ್ತ ಓಮನ ಕುಟ್ಟನ್‌ರ ಮನೆಗೆ ದಾಳಿ ನಡೆಸಿ ೩.೭೫ ಲಕ್ಷ ರೂ. ನಗದು ಹಾಗೂ ಐದೂವರೆ ಪವನ್‌ನ ಚಿನ್ನದ ಒಡವೆ ದೋಚಿ ಮನೆ ಸಾಮಗ್ರಿಗಳನ್ನೆಲ್ಲಾ ಹೊಡೆದು ಹಾನಿಗೊಳಿಸಿದ ನಂತರ ಆ ಮನೆಗೆ ಕಿಚ್ಚಿರಿಸಿ ಸುಮಾರು ಹತ್ತು ಲಕ್ಷ ರೂ. ತನಕ ನಷ್ಟ ಉಂಟುಮಾಡಿದ ಪ್ರಕರಣದ ಆರೋಪಿಗಳಾದ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ತೃತೀಯ) ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಯೂತ್ ಕಾಂಗ್ರೆಸ್ ಕಾರ್ಯ ಕರ್ತರಾದ ಪೆರಿಯಾ ಕಲ್ಯೋಟ್‌ನ ಸಿ. ಶಶಿಧರನ್ (44), ಎ. ಜನಾರ್ಧನನ್ (35), ಎಂ.ಕೆ. ನಾರಾಯಣನ್ (35), ಎಂ. ದಾಮೋದರನ್ (48), ಕೆ. ಶಶಿ ಪುದಿಮಪುರ (47), ಬೇಬಿ ಕುರ‍್ಯನ್ ಅಲಿಯಾಸ್ ಪೂವಲ್ ಕುನ್ನೇಲ್ ಬೇಬಿ (54) ಮತ್ತು ಎಚ್. ಕೃಷ್ಣನ್ ಕುರಾಂಗರ (45) ಎಂಬವರು ಖುಲಾಸೆಗೊಳಿಸಲ್ಪಟ್ಟ ಈ ಪ್ರಕರಣದ ಆರೋಪಿಗಳಾಗಿದ್ದಾರೆ.
2019 ಫೆಬ್ರವರಿ 18ರಂದು ಸಂಜೆ ಒಮನ್ ಕುಟ್ಟನ್‌ರ ಮನೆಗೆ ಅಕ್ರಮಿಗಳ ತಂಡ ದಾಳಿ ನಡೆಸಿ ಹಾನಿಗೊಳಿಸಿತ್ತು. ಬೇಕಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.