ಸಿಬಿಐ ಅಧಿಕಾರಿಯೆಂದು ತಿಳಿಸಿ ಉದ್ಯಮಿಗೆ ಹುಸಿ ಕರೆ:ಪುತ್ರಿಯನ್ನು ಮಾದಕ ವಸ್ತು ಸಹಿತ ಸೆರೆ ಹಿಡಿದಿರುವುದಾಗಿ ಬೆದರಿಕೆಯೊಡ್ಡಿ 15 ಲಕ್ಷ ರೂ. ಬೇಡಿಕೆ
ಮಂಜೇಶ್ವರ: ಮಂಜೇಶ್ವರ ನಿವಾಸಿಯಾದ ಉದ್ಯಮಿಯೊಬ್ಬರಿಗೆ ಅನಾಮಧೇಯ ವ್ಯಕ್ತಿಯೋರ್ವ ಫೋನ್ ಕರೆ ಮಾಡಿ ಬೆದರಿಕೆಯೊಡ್ಡಿ ೧೫ ಲಕ್ಷ ರೂಪಾಯಿ ಬೇಡಿಕೆಯೊಡ್ಡಿದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಉದ್ಯಮಿಯ ಮೊಬೈಲ್ಗೆ ಕರೆ ಬಂದಿದೆ. ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿ ತಾನು ಸಿಬಿಐ ಅಧಿಕಾರಿಯಾಗಿದ್ದೇನೆ. ನಿಮ್ಮ ಮಗಳನ್ನು ಮಾದಕವಸ್ತು ಸಹಿತ ಸೆರೆ ಹಿಡಿದಿದ್ದು ಆಕೆಯನ್ನು ದೆಹಲಿಗೆ ಕೊಂಡೊಯ್ಯುತ್ತಿದ್ದೇನೆ. ನಮ್ಮ ಜೊತೆ ಡಿವೈಎಸ್ಪಿಯೂ ಇದ್ದಾರೆ. ಆಕೆಯನ್ನು ಪ್ರಕರಣದಿಂದ ಪಾರು ಮಾಡಬೇಕಾದರೆ 15 ಲಕ್ಷ ರೂಪಾಯಿಯನ್ನು ನಮ್ಮ ಖಾತೆಗೆ ಪಾವತಿಸಬೇಕೆಂದು ತಿಳಿಸಿ ಗೂಗಲ್ ಪೇ ನಂಬ್ರವನ್ನು ನೀಡಿದ್ದಾನೆನ್ನಲಾಗಿದೆ. ಅಲ್ಲದೆ ಮಗಳ ಧ್ವನಿಯಲ್ಲಿ ಮಾತೃಭಾಷೆಯಲ್ಲಿ ಕೂಗಿಕೊಂಡು ತಂದೆಯನ್ನು ಕರೆಯುತ್ತಿರುವುದೂ ಕೇಳಿ ಬಂದಿದೆ. ಇದರಿಂದ ಆತಂಕಗೊಂಡ ಉದ್ಯಮಿ ಮಗಳು ಕಲಿಯುತ್ತಿರುವ ಮಂಗಳೂರಿನ ಕಾಲೇಜನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಮಗಳು ಕಾಲೇಜಿನಲ್ಲಿದ್ದು, ಯಾವುದೇ ಸಮಸ್ಯೆ ಉಂಟಾಗಿಲ್ಲವೆಂದು ತಿಳಿದು ನಿಟ್ಟುಸಿರು ಬಿಟ್ಟರು. ಇದೇ ರೀತಿ ಕಾಲೇಜಿನ ಹಲವು ವಿದ್ಯಾರ್ಥಿಗಳ ಹೆತ್ತವರಿಗೂ ಈ ಹಿಂದೆಯೂ ಕರೆ ಬಂದು ಹಣಕ್ಕಾಗಿ ಬೇಡಿಕೆಯೊಡ್ಡಿದ ಪ್ರಕರಣಗಳಿವೆಯೆಂದು ಹೇಳಲಾಗುತ್ತಿದೆ.