ಸ್ಕೂಟರ್- ಕಾರು ಢಿಕ್ಕಿ ಹೊಡೆದು ಜವುಳಿ ಅಂಗಡಿ ಮಾಲಕರಾದ ದಂಪತಿ ದಾರುಣ ಮೃತ್ಯು
ಕಾಸರಗೋಡು: ಸ್ಕೂಟರ್ ಮತ್ತು ಕಾರು ಢಿಕ್ಕಿ ಹೊಡೆದು ಜವುಳಿ ಅಂಗಡಿಯ ಮಾಲಕರಾದ ದಂಪತಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬಂದಡ್ಕ ಪ್ರಾಥಮಿಕ ಕುಟುಂಬ ಆರೋಗ್ಯ ಕೇಂದ್ರ ಬಳಿ ನಿವಾಸಿಗಳೂ ಬಂದಡ್ಕದ ಮಣವಾಟಿ ಟೆಕ್ಸ್‌ಟೈಲ್ ಅಂಗಡಿಯ ಮಾಲಕರೂ ಆಗಿರುವ ಕೆ.ಕೆ. ಕುಂಞಿಕೃಷ್ಣನ್ (79) ಮತ್ತು ಅವರ ಪತ್ನಿ ಚಿತ್ರಕಲ (63) ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿಗಳಾಗಿದ್ದಾರೆ. ಮೃತ ಕೆ.ಕೆ. ಕುಂಞಿಕೃಷ್ಣನ್ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಬಂದಡ್ಕ ಘಟಕದ ಅಧ್ಯಕ್ಷರೂ ಆಗಿದ್ದಾರೆ.
ಕೆ.ಕೆ. ಕುಂಞಿಕೃಷ್ಣನ್ ಮತ್ತು ಪತ್ನಿ ಚಿತ್ರಕಲ ನಿನ್ನೆ ಬೆಳಿಗ್ಗೆ ಸ್ಕೂಟರ್‌ನಲ್ಲಿ ಸಂಬಂಧಿಕರ ಮದುವೆ ಸಮಾರಂ ಭವೊಂದರಲ್ಲಿ ಭಾಗವಹಿಸಲೆಂದು ಹೋಗುತ್ತಿದ್ದ ದಾರಿ ಮಧ್ಯೆ ಬೇತರು ಪಾರದ ಕುಟ್ಟಿಕೋಲು-ಬೋವಿಕ್ಕಾನ ರಸ್ತೆ ಬಳಿ ಕಾಸರಗೋಡು ಭಾಗದಿಂದ ಬರುತ್ತಿದ್ದ ಕಾರು ಬೇತೂರು ಪಾರ ಕುನ್ನುಮೈಲ್‌ನಲ್ಲಿ ನಿಯಂತ್ರಣ ತಪ್ಪಿ ಸ್ಕೂಟರಿಗೆ ಢಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಢಿಕ್ಕಿ ಆಘಾತಕ್ಕೆ ದಂಪತಿ ಸ್ಕೂಟರ್‌ನಿಂದ ಹೊರಕ್ಕೆಸೆಯಲ್ಪಟ್ಟು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ಅಪಘಾತ ನಡೆದಾಕ್ಷಣ ಊರವರು ಸೇರಿ ಅಪಘಾತಕ್ಕೀಡಾದ ದಂಪತಿಗಳನ್ನು ತಕ್ಷಣ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹಗಳನ್ನು ಬಳಿಕ ಜನರಲ್ ಆಸ್ಪತ್ರೆಯ ಶವಾಗಾರದಲ್ಲೇ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಢಿಕ್ಕಿ ಹೊಡೆದ ಕಾರಿನ ಚಾಲಕ ಕುಂಬಳೆ ನಿವಾಸಿ ಮುಹಮ್ಮದ್ ಶಾನ್‌ನ ವಿರುದ್ಧ ಬೇಡಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ವಾಹನ ಅಪಘಾತ ಇಡೀ ಊರನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.
ಬಂದಡ್ಕಕ್ಕೆ ಸಮೀಪದ ಚಿಕ್ಕಂಡಮೂಲೆಯ ಕಣ್ಣನ್- ಮಾಣಿಕ್ಕ ದಂಪತಿ ಮಗನಾಗಿದ್ದಾರೆ ಮೃತ ಕುಂಞಿಕೃಷ್ಣನ್. ಇವರ ಪತ್ನಿ ಚಿತ್ರಕಲ ಕರಂದಕ್ಕಾಡ್ ನಿವಾಸಿಗಳಾದ ಕೃಷ್ಣ-ರಾಧಾ ದಂಪತಿಯ ಪುತ್ರಿಯಾಗಿದ್ದಾರೆ. ಮೃತರ ಮಕ್ಕಳಾದ ಎಂ. ಸುನಿಲ್ ಕುಮಾರ್, ಸುಖನ್ಯಾ (ದುಬೈ), ಅಳಿಯ ಅನಿಲ್, ಸೊಸೆ ವಿನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಾದವಿ, ಶಾರದ, ಅಪ್ಪಕುಂಞಿ ಎಂಬವರು ಮೃತ ಕುಂಞಿಕೃಷ್ಣನ್‌ರ ಸಹೋದರ ಸಹೋದರಿಯರಾಗಿದ್ದಾರೆ. ಚಂದ್ರನ್, ರಾಜು, ಪ್ರೇಮ, ಲಲಿತ, ಶಾಂತಿ ಎಂಬವರು ಮೃತ ಚಿತ್ರಕಲರ ಸಹೋದರ ಸಹೋದರಿಯರಾಗಿದ್ದಾರೆ.
ಈ ಅಪಘಾತ ನಡೆದ ಸ್ಥಳ ನಿರಂತರವಾಗಿ ಅಪಘಾತ ನಡೆಯುವ ಕೇಂದ್ರವಾಗಿದೆ. ಇಲ್ಲಿ ಈ ಹಿಂದೆಯೂ ಹಲವು ಅಪಘಾತಗಳು ಸಂಭವಿಸಿದೆ. ಇತ್ತೀಚೆಗೆ ಇದೇ ಸ್ಥಳದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತು. ಅಂದು ಅದೃಷ್ಟವಶಾತ್ ಆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಮೃತ್ಯು ದವಡೆಯಿಂದ ಪಾರಾಗಿದ್ದರು. ಆದ್ದರಿಂದ ಈ ಪ್ರದೇಶದಲ್ಲಿ ಅಪಾಯ ಸೂಚಕ ಫಲಕ ಸ್ಥಾಪಿಸುವುದರ ಜತೆಗೆ ಅಗತ್ಯದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಊರವರು ಆಗ್ರಹಪಟ್ಟಿದ್ದಾರೆ.