ಹನಿಟ್ರಾಪ್ನಲ್ಲಿ ಸಿಲುಕಿಸಿ ೫ ಲಕ್ಷ ರೂ. ಲಪಟಾವಣೆ: ಆರೋಪಿಗಳನ್ನು ಕಸ್ಟಡಿಗೆ ತೆಗೆದು ಹೆಚ್ಚಿನ ತನಿಖೆಗೊಳಪಡಿಸಲು ಪೊಲೀಸ್ ನಿರ್ಧಾರ
ಕಾಸರಗೋಡು: ಮಾಂಗಾಡ್ ನಿವಾಸಿಯಾದ ೫೯ರ ಹರೆಯದ ವ್ಯಕ್ತಿಯನ್ನು ಹನಿಟ್ರಾಪ್ನಲ್ಲಿ ಸಿಲುಕಿಸಿ ೫ ಲಕ್ಷ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ ಸೆರೆಗೀಡಾದ ಇಬ್ಬರು ಯುವತಿಯರ ಸಹಿತ ಏಳು ಮಂದಿಯನ್ನು ಹೆಚ್ಚಿನ ತನಿಖೆಗೊಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಕಸ್ಟಡಿಗೆ ತೆಗೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಕಲ್ಲಿಕೋಟೆ ಪೆರುಮಣ್ಣ ನಿವಾಸಿ ಪಿ. ಫೈಸಲ್ (೩೭), ಪತ್ನಿ ಕುಟ್ಟಿಕಾ ಟೂರ್ ನಿವಾಸಿ ಎಂ.ಪಿ. ಲುಬ್ನಾ (೨೯), ಕಾಸರಗೋಡು ಶಿರಿಬಾಗಿಲು ನಿವಾಸಿ ಎನ್. ಸಿದ್ದಿಕ್ (೪೮), ಮಾಂಗಾಡ್ನ ದಿಲ್ಶಾದ್, (೪೦), ಮುಟ್ಟತ್ತೋಡಿಯ ನಫೀಸತ್ ಮಿಸ್ರಿಯ (೪೦), ಮಾಂಞಾಡ್ನ ಅಬ್ದುಲ್ಲ ಕುಂಞಿ (೩೨), ಪಡನ್ನಕ್ಕಾಡ್ನ ರಫೀಕ್ (೪೨) ಎಂಬಿವರನ್ನು ಹೆಚ್ಚಿನ ತನಿಖೆಗೊಳಪಡಿಸಲು ನಿರ್ಧರಿಸಲಾಗಿದೆ.
ಈ ಹಣ ಲಪಟಾವಣೆ ಪ್ರಕರಣ ದಲ್ಲಿ ಇನ್ನೂ ಆರೋಪಿಗಳಿದ್ದಾರೆಯೇ ಎಂದು ತಿಳಿಯುವುದಕ್ಕಾಗಿ ತನಿಖೆ ಮುಂದುವರಿಸಲು ನಿರ್ಧರಿಸಿರುವುದಾಗಿ ಹೇಳಲಾಗುತ್ತಿದೆ.
ಆರೋಪಿಗಳ ಪೈಕಿ ರುಬೀನ ಎಂಬಾಕೆ ದೂರುಗಾರನನ್ನು ಮೊದಲು ಸಂಪರ್ಕಿಸಿದ್ದಳು. ಕಂಪ್ಯೂಟರ್ ದುರಸ್ತಿ ಮಾಡಿಸಿಕೊಡುವಂತೆ ವಿನಂತಿಸಿಕೊಂಡ ಆಕೆ ದೂರುಗಾರನನ್ನು ಬಲೆಯಲ್ಲಿ ಸಿಲುಕಿಸಿದ್ದಾಳೆ. ಆಕೆಯನ್ನು ನಂಬಿದ ದೂರುಗಾರ ಆಕೆಯನ್ನು ಸೇರಿಸಿಕೊಂಡು ಕಾಸರಗೋಡಿನ ಅಂಗಡಿಯೊಂದಕ್ಕೆ ತೆರಳಿದ್ದರು. ಆದರೆ ಅಲ್ಲಿ ಕಂಪ್ಯೂಟರ್ ರಿಪೇರಿ ಸಾಧ್ಯವಿಲ್ಲವೆಂದು ತಿಳಿದು ಬಂತು. ಇದರಿಂದ ಜನವರಿ ೨೫ರಂದು ದೂರುಗಾರ ಹಾಗೂ ಯುವತಿ ಮಂಗಳೂರಿಗೆ ತೆರಳಿದ್ದರೆನ್ನಲಾಗಿದೆ. ಅಲ್ಲಿನ ಹೋಟೆಲ್ ಕೊಠಡಿಯಲ್ಲಿ ದೂರುಗಾರನೊಂದಿಗೆ ಯುವತಿ ನಗ್ನ ಚಿತ್ರ ತೆಗೆದಿರುವುದಾಗಿ ದೂರಲಾಗಿದೆ. ಬಳಿಕ ಯುವತಿ ನೇತೃತ್ವದಲ್ಲಿ ತಂಡ ದೂರುಗಾರನನ್ನು ಪಡನ್ನಕ್ಕಾಡ್ನ ಮನೆಗೆ ತಲುಪಿಸಿದೆ. ಅಲ್ಲಿ ತಂಡ ಹಣದ ಬೇಡಿಕೆ ಮುಂದಿರಿಸಿ ಬೆದರಿಕೆಯೊಡ್ಡಿದೆ ಎನ್ನಲಾಗುತ್ತಿದೆ. ಇದರಿಂದ ೧೦ ಸಾವಿರ ರೂಪಾಯಿ ಗೂಗಲ್ ಪೇ ಮೂಲಕ, ೪,೯೦,೦೦೦ ರೂ. ಮುಂದಿನ ನಗದಾಗಿ ನೀಡುವುದಾಗಿಯೂ ಅನಂತರವೂ ಹಣಕ್ಕಾಗಿ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ದೂರುದಾರ ಮೇಲ್ಪರಂಬ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದರು. ಬಳಿಕ ಇನ್ಸ್ಪೆಕ್ಟರ್ ಅರುಣ್ ಮೋಹನ್ ನೇತೃತ್ವದಲ್ಲಿ ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.