ಹಾಸ್ಯ ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ನಿಧನ
ಮುಳ್ಳೇರಿಯ: ಹಾಸ್ಯ ಸಾಹಿತಿಯಾಗಿ ಪ್ರಸಿದ್ಧರಾಗಿದ್ದ ಕೊಟ್ಯಾಡಿ ಸಮೀಪದ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ (82) ನಿಧನ ಹೊಂದಿದರು. ಕೃಷಿಕರಾಗಿ, ಪಶು ನಾಟಿವೈದ್ಯರಾಗಿ, ಯಕ್ಷಗಾನ ಕಲಾವಿದರಾಗಿ, ಜನಾನುರಾಗಿಯಾಗಿದ್ದರು. ಆಶು ಚುಟುಕು ರಚನೆ ಇವರ ಹವ್ಯಾಸವಾಗಿತ್ತು. ವಿವಿಧ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಸಾಹಿತ್ಯ ರಚನೆಯ ಬಗ್ಗೆ ಮಾಹಿತಿ ನೀಡುತ್ತಿದ್ದರು. ಮಕ್ಕಳಿಂದ ಅಜ್ಜನೆಂಬ ಅಕ್ಕರೆಯ ಕರೆಗೆ ಪಾತ್ರರಾಗಿದ್ದರು.
ವಿದ್ಯಾರ್ಥಿ ಜೀವನದಲ್ಲಿ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರು. ಇವರ ಸಾಹಿತ್ಯ ಸೇವೆಯನ್ನು ಗಮನಿಸಿ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿ, ಸುಳ್ಯದ ಚಂದನ ಸಾಹಿತ್ಯ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ನಿಂದ ಸನ್ಮಾನ, ಮೂಡು ಬಿದ್ರೆಯ ಆಳ್ವಾಸ್ ನುಡಿಸಿರಿಯಲ್ಲಿ ಸನ್ಮಾನ ಸಹಿತ ವಿವಿಧ ಕಡೆಗಳಲ್ಲಿ ಗೌರವ ಪಡೆದಿದ್ದಾರೆ. ರಸಾಯನ, ಹಳಬರ ಜೋಳಿಗೆ, ಹೂಬಾಣ, ನೇಸರ ಮೊದಲಾದ ಚುಟುಕುಗಳನ್ನು ರಚಿಸಿದ್ದಾರೆ. ಮೃತರು ಪತ್ನಿ ಉಮಾ, ಮಕ್ಕಳಾದ ಸೂರ್ಯನಾರಾಯಣ, ಕೃಷ್ಣಮೂರ್ತಿ, ಕೃಷ್ಣ ಪ್ರಸಾದ್, ಸೊಸೆಯಂದಿರಾದ ಶ್ರುತಿ, ಕುಸುಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.