ಹೆತ್ತಬ್ಬೆಯನ್ನೇ ಹಲಗೆಯಿಂದ ಬಡಿದು ಕೊಂದ ಪುತ್ರ
ಕಾಸರಗೋಡು: ಮೊಬೈಲ್ ಫೋನ್ ಉಪಯೋಗದ ವಿಷಯದಲ್ಲಿ ಉಂಟಾದ ವಾಗ್ವಾದದಲ್ಲಿ ಪುತ್ರ ತನ್ನ ಹೆತ್ತಬ್ಬೆಗೆ ಹಲಗೆಯಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದು, ಬಳಿಕ ಚಿಕಿತ್ಸೆ ಮಧ್ಯೆ ಆಕೆ ಸಾವನ್ನಪ್ಪಿದ ಘಟನೆ ನಡೆದಿದೆ.
ನೀಲೇಶ್ವರ ಕಣಿಚ್ಚಿರದ ದಿ| ರಾಜನ್‌ರ ಪತ್ನಿ ರುಕ್ಮಿಣಿ (೬೩) ಸಾವನ್ನಪ್ಪಿದ ಮಹಿಳೆ. ಇದಕ್ಕೆ ಸಂಬಂಧಿಸಿ ಅವರ ಪುತ್ರ ಸುಜಿತ್ (೩೪)ನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಮುಂಜಾನೆ ಈ ಘಟನೆ ನಡೆದಿದೆ. ಮೊಬೈಲ್ ಫೋನ್ ಬಳಸುವುದಕ್ಕೆ ಸಂಬಂಧಿಸಿ ರುಕ್ಮಿಣಿ ಮತ್ತು ಪುತ್ರ ಸುಜಿತ್‌ನ ನಡುವೆ ಪರಸ್ಪರ ವಾಗ್ವಾದ ನಡೆಯಿತೆಂದೂ, ಆಗ ಕುಪಿತನಾದ ಶ್ರೀಜಿತ್ ಹಲಗೆಯಿಂದ ತಾಯಿಯ ತಲೆಗೆ ಬಡಿದು ಗಂಭೀರ ಗಾಯಗೊಳಿಸಿದನಲ್ಲದೆ, ತಲೆಯನ್ನು ಗೋಡೆಗೂ ಬಡಿದನೆಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ಗಾಯಗೊಂಡ ರುಕ್ಮಿಣಿಯನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗದೆ ಇಂದು ಮುಂಜಾನೆ ಅವರು ಸಾವನ್ನಪ್ಪಿದ್ದಾರೆ.
ಇದಕ್ಕೆ ಸಂಬಂಧಿಸಿ ಬಂಧಿತನಾದ ಸುಜಿತ್ ನಂತರ ತಾನು ನಡೆಸಿದ ಈ ಕ್ರೂರ ಕೃತ್ಯದಿಂದ ಮನನೊಂದ ಮಾನಸಿಕ ಸ್ಥಿಮಿತ ಕಳೆದುಕೊಂಡನು. ಆತನನ್ನು ಬಳಿಕ ಪೊಲೀಸರು ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೨)ದಲ್ಲಿ ಹಾಜರುಪಡಿಸಿದ ನಂತರ ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಆತ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅದರಿಂದಾಗಿ ವೈದ್ಯರ ಸಲಹೆ ಪ್ರಕಾರ ಆತನನ್ನು ನಂತರ ಕಲ್ಲಿಕೋಟೆಯ ಕುದಿರವೆಟ್ಟಂ ಮಾನ ಸಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿ ಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಜಿತ್ ಮಾದಕ ದ್ರವ್ಯ ವ್ಯಸನಿಯಾಗಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.
ನೀಲೇಶ್ವರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೆ. ಪ್ರೇಮ್ ಸದನ್ ಪ್ರಕರಣದ ಬಗ್ಗೆ ತನಿಖೆ ಆರಂ ಭಿಸಿದ್ದಾರೆ. ಮೃತ ರುಕ್ಮಿಣಿಯ ಇನ್ನೋರ್ವ ಪುತ್ರ ಮಾನಸಿಕ ವಿಕಲಚೇತನನಾಗಿದ್ದಾನೆಂದೂ ಪೊಲೀಸರು ತಿಳಿಸಿದ್ದಾರೆ.