ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ನಿಧನ
ಕಾಸರಗೋಡು: ಹೈಕೋರ್ಟ್‌ನ ನ್ಯಾಯವಾದಿ, ಸಿಪಿಎಂ ನೇತಾರನಾಗಿದ್ದ ಪಿ.ಕೆ. ಮುಹಮ್ಮದ್ (80) ನಿಧನ ಹೊಂದಿದರು. ಕೊಚ್ಚಿಯಲ್ಲಿರುವ ಮನೆಯಲ್ಲಿ ಅಸೌಖ್ಯ ಕಾಣಿಸಿಕೊಂಡ ಇವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಎರ್ನಾಕುಳಂ ಜಿಲ್ಲೆಯ ಕೋದಮಂಗಲ ನಿವಾಸಿಯಾದ ಮುಹಮ್ಮದ್ 1962ರಲ್ಲಿ ಉದ್ಯೋಗ ಅರಸಿ ಕಾಸರಗೋಡಿಗೆ ಬಂದಿದ್ದರು. ಬಳಿಕ ಕಾಸರಗೋಡು ಬಸ್ ನಿಲ್ದಾಣ ಸಮೀಪದ ಬದ್ರಿಯ ಹೊಟೇಲ್‌ಗೆ ತಲುಪಿ ಹೊಟೇಲ್ ಮಾಲಕ ಬದ್ರಿಯಾ ಅಬ್ದುಲ್ ಖಾದರ್ ಹಾಜಿ ಅವರೊಂದಿಗೆ ಕೆಲಸ ಯಾಚಿಸಿದರು.
ಹೊಟೇಲ್ ಕೆಲಸವನ್ನು ಪ್ರಮಾಣಿಕವಾಗಿ ನಿರ್ವಹಿಸಿದ ಮುಹಮ್ಮದ್‌ರ ಮೇಲೆ ಕರುಣೆ ತೋರಿ ಅವರಿಗೆ ಕಾನೂನು ಶಿಕ್ಷಣ ನಡೆಸಲು ಅವಕಾಶ ವೊದಗಿಸಿಕೊಟ್ಟರು.ಶಿಕ್ಷಣ ಪೂರ್ತಿಗೊಳಿಸಿದ ಬಳಿಕ ಕಾಸರ ಗೋಡಿನಲ್ಲಿ ನ್ಯಾಯವಾದಿಯಾಗಿ ಸೇವೆ ಆರಂಭಿಸಿದರು. ಅದರ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಮೃತರು ಪತ್ನಿ ರುಖಿಯ, ಮಕ್ಕಳಾದ ಯಾಸ್ಮಿನ್, ಮುನೀರ್, ನಿಸಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.