ಹೊಳೆಯಲ್ಲಿ ತೇಲಿ ಬಂದ ಮರ ನಾಪತ್ತೆ : ಕೊಂಡೊಯ್ದವರು ಯಾರು? ನಾಡಿನಲ್ಲಿ ತೀವ್ರ ಚರ್ಚೆ
ಬದಿಯಡ್ಕ: ಅತೀ ತೀವ್ರ ಮಳೆಗೆ ಪಳ್ಳತ್ತಡ್ಕ ಹೊಳೆ ಮೂಲಕ ತೇಲಿ ಬಂದು ಕುಡ್ಪಂಗುಳಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಹಲಸಿನ ಮರ ಏನಾಯಿತೆಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.
ಇತ್ತೀಚೆಗೆ ಮರ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿರುವುದನ್ನು ಕಂಡ ನಾಗರಿಕರು ಆ ಬಗ್ಗೆ ಕೂಡಲೇ ಬದಿಯಡ್ಕ ಗ್ರಾಮಾಧಿಕಾರಿಗಳಿಗೆ ತಿಳಿಸಿದ್ದರು. ಅಷ್ಟರೊಳಗೆ ಮರದಿಂದ ಒಂದು ತುಂಡು ಕತ್ತರಿಸಿ ತೆಗೆಯಲಾಗಿತ್ತು. ಮರವನ್ನು ತುಂಡರಿಸಿದ ವ್ಯಕ್ತಿಗಳೇ ಗ್ರಾಮ ಕಚೇರಿ ನೌಕರರ ನಿರ್ದೇಶದಂತೆ ಹೊಳೆಗೆ ಹಾಕಿದ್ದರು. ಇದೇ ವೇಳೆ ಅಣೆಕಟ್ಟಿನಲ್ಲಿದ್ದ ಹಲಸಿನ ಮರವನ್ನು ಹರಾಜು ನಡೆಸಲು ಪಂಚಾಯತ್ ಸೆಕ್ರೆಟರಿ ಮರ ಕಡಿಯುವ ವ್ಯಕ್ತಿಯೊಂ ದಿಗೆ ಸ್ಥಳಕ್ಕೆ ತಲುಪಿದಾಗ ಮರ ಅಲ್ಲಿಂದ ನಾಪತ್ತೆಯಾಗಿತ್ತು. ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಮರ ಕಾಣೆಯಾದ ವಿಷಯ ನಾಡಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಯಾರು ತನಿಖೆ ನಡೆಸಿದರೂ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಿಲ್ಲವೆಂಬ ಮಾತು ಕೇಳಿ ಬಂದಿದೆ. ಘಟನೆಯ ಹಿಂದೆ ಓರ್ವ ಸದಸ್ಯ ಕಾರ್ಯಾಚರಿಸಿರುವುದಾಗಿ ಹೇಳಲಾಗುತ್ತಿದೆಯಾದರೂ ಆತನ ಹೆಸರು ಬಹಿರಂಗಪಡಿಸಲು ನಿರಾಕರಿಸುತ್ತಿದ್ದಾರೆ.
ಕಳೆದ ವರ್ಷ, ಅದರ ಮುಂಚಿನ ವರ್ಷವೂ ಇದೇ ರೀತಿಯಲ್ಲಿ ಬೃಹತ್ ಗಾತ್ರದ ತೇಗು ಸಹಿತ ಬೆಲೆಬಾಳುವ ಮರಗಳು ಹೊಳೆಯಲ್ಲಿ ತೇಲಿ ಬಂದು ಅಣೆಕಟ್ಟಿನಲ್ಲಿ ಸಿಲುಕಿಕೊಂಡಿದ್ದವು. ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳೂ ದಿನ ಬೆಳಗಾಗುವುದರೊಳಗೆ ನಾಪತ್ತೆಯಾಗಿದ್ದವೆಂದು ನಾಗರಿಕರು ತಿಳಿಸುತ್ತಿದ್ದಾರೆ.
ಬೇಸಿಗೆಕಾಲದಲ್ಲಿ ಮರ ಕಳವು ನಡೆಸುವ ತಂಡ ಹೊಳೆ ಬದಿ ಹಾಗೂ ಕರ್ನಾಟಕದ ಅರಣ್ಯದಲ್ಲಿರುವ ಭಾರೀ ಮೌಲ್ಯದ ಮರಗಳ ಬೇರು ತುಂಡರಿಸಿಡುತ್ತಿದ್ದು, ಮಳೆಗಾಲದಲ್ಲಿ ಹೊಳೆಗೆ ಬೀಳುವ ಮರಗಳು ಪಳ್ಳತ್ತಡ್ಕ ಹೊಳೆ ಮೂಲಕ ಕುಡ್ಪಂಗುಳಿ ಅಣೆಕಟ್ಟಿಗೆ ತಲುಪಿಸಿ ಕದ್ದು ಸಾಗಾಟ ನಡೆಸುವುದು ತಂಡದ ವೃತ್ತಿಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಆದರೆ ಈ ಬಗ್ಗೆ ಯಾವುದೇ ತನಿಖೆ ನಡೆಯುತ್ತಿಲ್ಲ ವೆಂದೂ ದೂರಲಾಗುತ್ತಿದೆ.