ಹೋಟೆಲ್ ಕೊಠಡಿಯಲ್ಲಿ ದಂಪತಿ ನೇಣು ಬಿಗಿದು ಆತ್ಮಹತ್ಯೆ
ತಿರುವನಂತಪುರ: ಇಲ್ಲಿನ ಆಡಂಬರ ಹೊಟೇಲ್‌ನಲ್ಲಿ ಕಳೆದ ೧೦ ದಿವಸಗಳಿಂದ ವಾಸಿಸುತ್ತಿದ್ದ ದಂಪತಿಯ ಮೃತದೇಹಗಳು ಕೊಠಡಿಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದೆ. ಪಡಿಞಾರಕೋಟೆಯಲ್ಲಿ ವಾಸಿಸುವ ಅರಿಪ್ಪಾಡ್ ಚೇಪ್ಪಾಡ್ ನಿವಾಸಿ ಸುಗತನ್ (೭೧), ಪತ್ನಿ ಸುನಿಲ (೭೦) ಎಂಬಿವರು ಮೃತ ಪಟ್ಟವರು. ಮನೆಯ ದುರಸ್ಥಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿ ಕಳೆದ ೨೬ರಂದು ಪುತ್ರಿಯ ಜೊತೆ ತಲುಪಿ ಕೊಠಡಿ ಬಾಡಿಗೆಗೆ ಪಡೆದಿದ್ದರು. ನಿನ್ನೆ ಬೆಳಿಗ್ಗೆವರೆಗೆ ಕೊಠಡಿಯಲ್ಲಿ ಇದ್ದ ಇವರು ಅಪರಾಹ್ನ ಹೊಟೇಲ್ ನೌಕರ ಕೊಠಡಿ ಶುಚೀಕರಿಸಲೆಂದು ತಲುಪಿದಾಗ ಬಾಗಿಲು ಮುಚ್ಚಿರು ವುದರ ಹಿನ್ನೆಲೆಯಲ್ಲಿ ಶಂಕೆ ತೋರಿ ತೆರೆದಾಗ ನೇಣು ಬಿಗಿದ ಸ್ಥಿತಿ ಯಲ್ಲಿ ಮೃತ ದೇಹ ಪತ್ತೆಯಾಗಿದೆ.
ಆರ್ಥಿಕ ಸಂದಿಗ್ಧತೆ ಆತ್ಮಹತ್ಯೆಗೆ ಕಾರಣವೆಂದು ಸೂಚನೆ ಲಭಿಸಿದೆ. ಕಳೆದ ಜನವರಿಯಲ್ಲಿ ಇವರ ಪುತ್ರಿ ಉತ್ತರಾಳ ವಿವಾಹವನ್ನು ಇದೇ ಹೊಟೇಲ್‌ನಲ್ಲಿ ನಡೆಸಲಾಗಿದೆ. ಮಲೆಯನ್‌ಕೀಳ್ ಕರಿಪ್ಪೂರ್ ನಕ್ಷತ್ರ ಗಾರ್ಡನ್ಸ್‌ನಲ್ಲಿ ವಾಸಿಸುತ್ತಿದ್ದ ಇವರು ಜನವರಿಯಲ್ಲಿ ಆ ಮನೆಯನ್ನು ಮಾರಾಟ ಗೈದಿದ್ದರು. ಬಳಿಕ ಕಳಕೂಟದಲ್ಲಿ ಬಾಡಿಗೆಗೆ ವಾಸವಾಗಿದ್ದು, ಆ ಬಳಿಕ ಪಡಿಞಾರಕೋಟದಲ್ಲಿ ಮನೆ ಖರೀದಿಸಿದ್ದರು.