ಅಡ್ಯನಡ್ಕ ಬ್ಯಾಂಕ್ ಕಳವು ತನಿಖೆಗೆ ವಿಶೇಷ ತಂಡ: ಕುಂಡಂಕುಳಿ ಜ್ಯುವೆಲ್ಲರಿ ಕಳವು ಮಾದರಿಯ ಕೃತ್ಯ
ಅಡ್ಯನಡ್ಕ: ಕರ್ಣಾಟಕ ಬ್ಯಾಂಕ್‌ನ ಅಡ್ಯನಡ್ಕ ಶಾಖೆಯಲ್ಲಿ ನಡೆದ ಕಳವು ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ತನಿಖಾ ತಂಡವನ್ನು ರೂಪೀಕರಿಸಲಾಗಿದೆ. ಬ್ಯಾಂಕ್‌ನ ಸಿಸಿ ಕ್ಯಾಮರಾದಲ್ಲಿ ಲಭಿಸಿದ ದೃಶ್ಯವನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲಿ ಬಲೆಗೆ ಹಾಕಲು ಸಾಧ್ಯವಿದೆಯೆಂಬ ನಿರೀಕ್ಷೆ ಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಈ ಬ್ಯಾಂಕ್ ಕಳವು ಹಿಂದೆ ನುರಿತ ಕಳ್ಳರೇ ಕಾರ್ಯಾಚರಿಸಿ ರಬಹುದೆಂದು ಅಂದಾಜಿಸಲಾಗಿದೆ.
ಈ ಹಿಂದೆ ಕುಂಡಂಕುಳಿಯ ಸುಮಂಗಲಿ ಜ್ಯುವೆಲ್ಲರಿಯಿಂದ ನಡೆದ ಕಳವು ಮಾದರಿಯಲ್ಲೇ ಅಡ್ಯನಡ್ಕ ಬ್ಯಾಂಕ್ ಕಳವು ನಡೆದಿದೆ. ಕುಂಡಂಕುಳಿ ಜ್ಯುವೆಲ್ಲರಿ ಕಳವಿನಲ್ಲಿ ಉತ್ತರಭಾರತದ ಕಳ್ಳರ ತಂಡ ಭಾಗಿಯಾಗಿದ್ದು, ಭಾರೀ ನಿಗಾ ಬಳಿಕ ಕಳ್ಳರನ್ನು ಸೆರೆಹಿಡಿಯಲಾಗಿತ್ತು. ಇದರಿಂದ ಅಂತಹುದೇ ತಂಡ ಅಡ್ಯನಡ್ಕ ಬ್ಯಾಂಕ್ ಕಳವಿನಲ್ಲೂ ಭಾಗಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಕಳವು ತಂಡ ಸಂಚರಿಸಿದ ವಾಹನ ಪೆರ್ಲ ಭಾಗದಿಂದ ತೆರಳಿತ್ತೆಂದೂ ಅಂದಾಜಿಸಲಾಗಿದೆ. ಆದ್ದರಿಂದ ಈ ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸುವ ಸಾಧ್ಯತೆಯಿದೆಯೆನ್ನಲಾಗಿದೆ.