ಅಣಂಗೂರಿನಲ್ಲಿ ಖಾಸಗಿ ಬಸ್ ಅಪಘಾತ : ಮೂವರು ಪ್ರಯಾಣಿಕರಿಗೆ ಗಾಯ
ಕಾಸರಗೋಡು: ಅಣಂಗೂರಿನಲ್ಲಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಇಂದು ಬೆಳಿಗ್ಗೆ ೯.೧೫ರ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಣಂಗೂರು ಸ್ಕೌಟ್ ಭವನ ಸಮೀಪ ಅಪಘಾತವುಂಟಾಗಿದೆ. ಕಣ್ಣೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ವಿದ್ಯಾನಗರ ಬಳಿ ಬಿ.ಸಿ ರೋಡ್‌ನಲ್ಲಿ ಪ್ರಯಾಣಿಕರನ್ನು ಇಳಿಸಿದ ಬಳಿಕ ಬೇರೊಂದು ಬಸ್ಸನ್ನು ಹಿಂದಿಕ್ಕಲು ಅಪರಿಮಿತ ವೇಗದಲ್ಲಿ ಬಸ್ ಸಂಚರಿಸಿದಾಗ ಅಪಘಾತವುಂಟಾಗಿದೆ. ಬಸ್ಸನಲ್ಲಿ ಚಾಲಕ, ಕಂಡಕ್ಟರ್ ಸಹಿತ ಏಳು ಮಂದಿ ಪ್ರಯಾಣಿಕರಿದ್ದರು.
ಕಾಮಗಾರಿ ಪೂರ್ಣಗೊಂಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಮಿತ ವೇಗದಲ್ಲಿ ಸಂಚರಿಸಿದ ಬಸ್ ಮಗುಚಿ ಬಿದ್ದಿದೆ. ನಾಗರಿಕರು ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಂತೆ ಚಾಲಕ ಹಾಗೂ ಕಂಡಕ್ಟರ್ ಓಡಿ ಪರಾರಿಯಾಗಿದ್ದಾರೆ. ಈ ಬಸ್ ಕಾಞಂಗಾಡ್‌ನಿಂದಲೇ ಅಪರಿಮಿತ ವೇಗದಲ್ಲಿ ಸಂಚರಿಸಿದೆಯೆಂದು ಪ್ರಯಾಣಿಕರು ತಿಳಿಸಿದ್ದಾರೆ. ಗಾಯಗೊಂಡವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಬಸ್‌ನ್ನು ಕ್ರೇನ್ ಬಳಸಿ ಮೇಲಕ್ಕೆತ್ತಲಾಯಿತು. ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧಗಂಟೆ ಸಾರಿಗೆ ಅಡಚಣೆ ಉಂಟಾಯಿತು. ಕಾಸರಗೋಡು ನಗರ ಠಾಣೆ ಪೊಲೀಸರು ತಲುಪಿ ಪರಿಶೀಲನೆ ನಡೆಸಿದರು.