ಅಯೋಧ್ಯೆಯಿಂದ ಶಬರಿಮಲೆ ತೀರ್ಥಾಟನೆ ನಡೆಸುತ್ತಿದ್ದ ಮಧ್ಯೆ ಕೂಡ್ಲು ನಿವಾಸಿ ಸಾವು
ಕಾಸರಗೋಡು: ಅಯೋಧ್ಯೆ ಯಿಂದ ಕಾಲ್ನಡೆಯಾಗಿ ಶಬರಿಮಲೆಗೆ ಬರುತ್ತಿದ್ದ ಕೂಡ್ಲು ನಿವಾಸಿ ತೀರ್ಥಾಟನೆ ಮಧ್ಯೆ ಸಾವನ್ನಪ್ಪಿದ ಘಟನೆ ನಡೆದಿದೆ. ಕೂಡ್ಲು ಪಚ್ಚಕ್ಕಾಡಿನ ಶಿವಪ್ರಸಾದ್ (45) ಸಾವನ್ನಪ್ಪಿದ ತೀರ್ಥಾಟಕ. ಇವರು ಕಳೆದ ೨೪ ವರ್ಷಗಳಿಂದ ಶಬರಿಮಲೆ ದರ್ಶನ ನಡೆಸುತ್ತಾ ಬಂದಿರುವ ಅಯ್ಯಪ್ಪ ಭಕ್ತರಾಗಿದ್ದಾರೆ. ಮೂರು ವರ್ಷ ಪಾದಯಾತ್ರೆ ಮೂಲಕ ಶಬರಿ ಮಲೆ ಕ್ಷೇತ್ರ ದರ್ಶನ ನಡೆಸಿದ್ದರು.
ಕಳೆದ ಸೆಪ್ಟಂಬರ್ ೨೫ರಂದು ಶಿವಪ್ರಸಾದ್ ಕಾಸರಗೋಡಿನಿಂದ ಅಯ್ಯಪ್ಪ ವ್ರತಾನುಷ್ಠಾನಗಳೊಂದಿಗೆ ರೈಲಿನಲ್ಲಿ ಅಯೋಧ್ಯೆಗೆ ಹೋಗಿದ್ದರು. ಅಲ್ಲಿಂದ ಅವರು ಅಕ್ಟೋಬರ್ ಒಂದಕ್ಕೆ ತಮ್ಮ ಸ್ನೇಹಿತರಾದ ಕೂಡ್ಲು ನಿವಾಸಿ ಹಾಗೂ ಅಯ್ಯಪ್ಪ ವ್ರತಧಾರಿ ಹರೀಶ್ ಜತೆಗೆ ಕಾಲ್ನಡಿಗೆಯಾಗಿ ಶಬರಿಮಲೆಗೆ ಪ್ರಯಾಣ ಆರಂಭಿಸಿ ದ್ದರು. ದಾರಿ ಮಧ್ಯೆ ನಿನ್ನೆ ಬೆಳಿಗ್ಗೆ 7 ಗಂಟೆಗೆ ಇವರು ಮಧ್ಯಪ್ರದೇಶ ನಿಯೋಣಿ ಜಿಲ್ಲೆಗೆ ತಲುಪಿದಾಗ ಶಿವಪ್ರಸಾದ್‌ರಿಗೆ ದಿಢೀರ್ ಎದೆನೋವು ಅನುಭವವಾಗಿದೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಮೃತದೇಹವನ್ನು ಇಂದು ರಾತ್ರಿ ಊರಿಗೆ ತಲುಪಿಸುವ ಸಾಧ್ಯತೆ ನಡೆಸಲಾಗುತ್ತಿದೆ. ಅಪ್ಪು-ಶ್ರೀದೇವಿ ದಂಪತಿ ಪುತ್ರನಾಗಿರುವ ಮೃತ ಶಿವಪ್ರಸಾದ್ ಕೂಡ್ಲಿನಲ್ಲಿ ಕ್ಯಾಟರಿಂಗ್ ಸರ್ವೀಸ್ ನಡೆಸುತ್ತಿದ್ದರು.
ಮೃತರು ಹೆತ್ತವರ ಹೊರತಾಗಿ ಪತ್ನಿ ಸರಸ್ವತಿ, ಮಕ್ಕಳಾದ ಆರವ್ ಪ್ರಸಾದ್, ಆಶ್ವಿ ಪ್ರಸಾದ್, ಸಹೋದರ-ಸಹೋದರಿ ಯರಾದ ಮೋಹನನ್, ಶಾಂತಿ, ಶಾಂಭವಿ, ವನಿತಾ ಕುಮಾರಿ, ವಿನುತ ಕುಮಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.