ಇರಿಯಣ್ಣಿಯಲ್ಲಿ ಹುಡುಕಾಟ ನಡೆಯುತ್ತಿರುವಾಗಲೇ ಕಿನಾನೂರು ಕರಿಂದಳದಲ್ಲೂ ಚಿರತೆ ಪ್ರತ್ಯಕ್ಷ
ಮುಳ್ಳೇರಿಯ: ಬೋವಿಕ್ಕಾನ ಸಮೀಪ ಇರಿಯಣ್ಣಿಯಲ್ಲಿ ಪ್ರತ್ಯಕ್ಷಗೊಂಡು ನಾಡಿನಲ್ಲಿ ಭೀತಿ ಹುಟ್ಟಿಸಿದ ಚಿರತೆಯನ್ನು ಸೆರೆಹಿಡಿ ಯಲು ಅರಣ್ಯ ಅಧಿಕಾರಿಗಳು ಗೂಡು ಸ್ಥಾಪಿಸಿ ನಿಗಾ ವಹಿಸುತ್ತಿರುವಾಗಲೇ ಕಿನಾನೂನು ಕರಿಂದಳದಲ್ಲೂ ಚಿರತೆ ಕಾಣಿಸಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಕರಿಂದಳ, ಚೊಯ್ಯಂಕೋಡ್, ಕಕ್ಕೋಲ್ ಎಂಬಿಡೆಗಳಲ್ಲಿ ಚಿರತೆ ಹಗಲುಹೊತ್ತಿನಲ್ಲೇ ನಡೆದು ಹೋಗುತ್ತಿರುವುದು ಕಂಡುಬಂದಿರುವುದಾಗಿ ವರದಿಯಾಗಿದೆ. ಕಕ್ಕೋಲ್ನ ಗುಡ್ಡೆ ಪ್ರದೇಶದಲ್ಲಿ ಚಿರತೆ ನಡೆದು ಹೋಗುತ್ತಿರುವ ದೃಶ್ಯವನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದಾರೆ. ನಿನ್ನೆ ಬೆಳಿಗ್ಗೆ ಈ ಗುಡ್ಡೆ ಸಮೀಪದಲ್ಲಾಗಿ ನಡೆದು ಹೋಗುತ್ತಿದ್ದ ಜಿಷ್ಣು ಎಂಬವರು ಚಿರತೆಯ ದೃಶ್ಯಗಳನ್ನು ಮೊಬೈಲ್ ಫೋನ್ನಲ್ಲಿ ಸೆರೆಹಿಡಿದಿದ್ದಾರೆ. ವಿಷಯ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ತಲುಪಿ ತಪಾಸಣೆ ಆರಂಭಿಸಿದ್ದಾರೆ.