ಕಣ್ಣೂರಿನಲ್ಲಿ ಬೃಹತ್ ಮಾದಕದ್ರವ್ಯ ಬೇಟೆ: ಗಾಯಕಿ ಸೇರಿದಂತೆ ನಾಲ್ವರ ಸೆರೆ
ಕಣ್ಣೂರು: ಕಣ್ಣೂರಿನಲ್ಲಿ ಪೊಲೀಸರು ಬೃಹತ್ ಮಾದಕದ್ರವ್ಯ ಬೇಟೆ ನಡೆಸಿದ್ದು, ಅದಕ್ಕೆ ಸಂಬಂಧಿಸಿ ಗಾಯಕಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ರಿಂದ ೧೬೬.೨೧ ಗ್ರಾಂ ಎಂಡಿಎಂಎ, ೧೧೧.೮ ಗ್ರಾಂ ಹ್ಯಾಶಿಶ್ ಆಯಿಲ್ ಮತ್ತು ೩ ಮೊಬೈಲ್ ಫೋನ್ಗಳನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಕಣ್ಣೂರು ಪುದಿಯತೆರುವಿನ ಪಿ.ಎ. ರಿಸ್ವಾನ್ (೨೨), ಕಣ್ಣೂರು ಸಿಟಿಯ ವರಕಾಡತ್ ದಿಲ್ಶಾದ್ (೩೦), ಹೋಟೆಲ್ ಮಾಲಕ ಯಾಸಿರ್ (೩೦) ಮತ್ತು ಗಾಯಕಿ ಮರಕ್ಕಾಕಂಡಿ ತೈಯ್ಯಿಲ್ ನಿವಾಸಿ ಅಪರ್ಣಾ ಅನೀಶ್ (೨೩) ಎಂಬಿವರು ಬಂಧಿತ ಆರೋಪಿಗಳಾಗಿ ದ್ದಾರೆ. ಕಣ್ಣೂರು ಪೇಟೆಯ ಹೋಟೆಲೊಂದರಲ್ಲಿ ಮಾದಕದ್ರವ್ಯ ವ್ಯವಹಾರ ನಡೆಯುತ್ತಿದೆಯೆಂಬ ಗುಪ್ತ ಮಾಹಿತಿ ಕಣ್ಣೂರು ಸಿಟಿ ಪೊಲೀಸ್ ಎಸ್ಐ ಟಿ.ಪಿ. ಶಮಿಲ್ ಕುಮಾರ್ಗೆ ಲಭಿಸಿತ್ತು. ಅದರಂತೆ ಅವರ ನೇತೃತ್ವದ ಪೊಲೀಸರು ಅಲ್ಲಿಗೆ ತಕ್ಷಣ ದಾಳಿ ನಡೆಸಿದ ಶೋಧದಲ್ಲಿ ಅಲ್ಲಿಂದ ೧.೦೫ ಗ್ರಾಂ ಎಂಡಿಎಂಎ ಲಭಿಸಿತ್ತು. ಅದಕ್ಕೆ ಸಂಬಂಧಿಸಿ ಶ್ರೀಮಂತ ಕುಟುಂಬವೊಂದ ಸದಸ್ಯೆಯೂ ಆಗಿರುವ ಅಪರ್ಣಾ ಅನೀಶ್ ಮತ್ತು ರಿಸ್ವಾನ್ ಎಂಬಿವರನ್ನು ಪೊಲೀಸರು ಬಂಧಿಸಿದ್ದರು. ಅವರಿಂದ ಲಭಿಸಿದ ಮಾಹಿತಿಯಂತೆ ಪೊಲೀಸರು ಮತ್ತೆ ನಡೆಸಿದ ಕಾರ್ಯಾಚರಣೆಯಲ್ಲಿ ರಿಸ್ವಾನ್, ದಿಲ್ಶಾದ್ರನ್ನು ಬಂಧಿಸಿ ಅಲ್ಲಿಂದ ೧೫೬.೧೬ ಗ್ರಾಂ ಎಂಡಿಎಂಎ, ೧೧೧.೮ ಗ್ರಾಂ ಹ್ಯಾಶಿಶ್ ಆಯಿಲ್ ಮತ್ತು ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿದ್ದಾರೆ. ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು, ಈ ಮಾದಕ ದ್ರವ್ಯ ಜಾಲದ ಪ್ರಧಾನ ಸೂತ್ರಧಾರರನ್ನು ಪತ್ತೆಹಚ್ಚುವ ಯತ್ನದಲ್ಲೂ ತೊಡಗಿದ್ದಾರೆ.