ಕಲ್ಲಿಕೋಟೆಯಲ್ಲಿ ಬೃಹತ್ ಗಾಂಜಾ ಬೇಟೆ : ಕಾಸರಗೋಡಿನ ಇಬ್ಬರ ಸಹಿತ ಮೂವರು ಸೆರೆ
ಕಾಸರಗೋಡು: ಹೊಸ ವರ್ಷಾಚರಣೆಗೆ ಇನ್ನೇನು ಎರಡು ದಿನಗಳು ಮಾತ್ರವೇ ಬಾಕಿ ಉಳಿದುಕೊಂಡಿರುವಂತೆಯೇ, ಹೊರ ರಾಜ್ಯಗಳಿಂದ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಮಾದಕ ವಸ್ತುಗಳು ಹರಿದು ಬರತೊಡಗಿದೆ. ಅದನ್ನು ತಡೆಗಟ್ಟಲು ಅಬಕಾರಿ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ಆರಂಭಿಸಿದೆ.
ಇದರಂತೆ ಕಲ್ಲಿಕೋಟೆಯ ಎರಡೆಡೆಗಳಲ್ಲಾಗಿ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಗಳಲ್ಲಾಗಿ ಒಟ್ಟು ೫೬ ಕಿಲೋ ಗ್ರಾಂ ಗಾಂಜಾ ಪತ್ತೆ ಹಚ್ಚಿ ವಶಪಡಿಸಲಾಗಿದೆ.
ಇದಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿಗಳಾದ ಉಳಿಯತ್ತಡ್ಕ ಉಳಿಯ ಹೌಸ್‌ನ ಮೊಹಮ್ಮದ್ ಫೈಸಲ್ (೩೬), ಸೀತಾಂಗೋಳಿ ಸಮೀಪದ ಕಿನ್ಫ್ರಾ ಬಿಲಾಲ್‌ನಗರ ಬಳಿ ನಿವಾಸಿ ಅಬೂಬಕರ್ ಸಿದ್ದೀಕ್ (೩೯) ಮತ್ತು ಕಲ್ಲಿಕೋಟೆ ಚಕ್ಕುಂಕಡವು ನಿವಾಸಿ ಮುರ್ಶಿದ್ ಅಲಿ (೩೫) ಎಂಬವರನ್ನು ಬಂಧಿಸಲಾಗಿದೆ.
ಹೊಸವರ್ಷಾಚರಣೆಯ ವೇಳೆ ಆಂಧ್ರ ಪ್ರದೇಶ ಮತ್ತು ಒಡಿಸ್ಸಾದಿಂದ ಕರ್ನಾಟಕದ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಗಾಂಜಾ ಸಾಗಿಸಲಾಗುತ್ತಿದೆ. ಈ ರೀತಿ ಗಾಂಜಾ ಸಾಗಿಸುವ ವಾಹನಗಳಿಗೆ ನಕಲಿ ರಿಜಿಸ್ಟ್ರೇಷನ್ ನಂಬ್ರ ಪ್ಲೇಟ್‌ಗಳನ್ನು ಅಳವಡಿಸಲಾಗುತ್ತಿದೆ. ಕಳವುಗೈದ ವಾಹನಗಳನ್ನು ಇದಕ್ಕೆ ಕೆಲವರು ಬಳಸುತ್ತಿದ್ದಾರೆ.
ಕಲ್ಲಿಕೋಟೆಯ ವೈ.ಎಂ.ಸಿ.ಐ. ಕ್ರಾಸ್ ರಸ್ತೆ ಬಳಿ ನಿಲ್ಲಿಸಲಾಗಿದ್ದ ಕಾರನ್ನು ಪೊಲೀಸರು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಗುಪ್ತವಾಗಿ ನಿರ್ಮಿಸಲಾಗಿದ್ದ ಸೆರೆಯೊಳಗೆ ಗಾಂಜಾ ಬಚ್ಚಿಟ್ಟಿರುವುದನ್ನು ಪತ್ತೆಹಚ್ಚಿದ್ದಾರೆ. ಅದರಲ್ಲಿ ೨೬ ಪ್ಯಾಕೆಟ್ ಗಾಂಜಾ ಪತ್ತೆಯಾಗಿದೆ. ಪ್ರತೀ ಪ್ಯಾಕೆಟ್‌ಗಳಲ್ಲಿ ತಲಾ ಎರಡು ಕಿಲೋ ದಂತೆ ಗಾಂಜಾ ಒಳಗೊಂಡಿತ್ತು. ಹೀಗೆ ಒಟ್ಟು ೫೭.೯೦ ಕಿಲೋ ಗಾಂಜಾ ಅದರಲ್ಲಿ ಒಳಗೊಂಡಿತ್ತು. ಇದಕ್ಕೆ ಸುಮಾರು ೨೫ ಲಕ್ಷ ರೂ. ಬೆಲೆ ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ನಡೆಸಲಾದ ತನಿಖೆಯಲ್ಲಿ ಕಾಸರಗೋಡಿನವರಾದ ಫೈಸಲ್ ಮತ್ತು ಅಬೂಬಕರ್ ಸಿದ್ದೀಕ್‌ರನ್ನು ಬಳಿಕ ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿ ಕಲ್ಲಿಕೋಟೆ ಇರಿಙಲ್ಲೂರು ಮಾತ್ತರ ರಸ್ತೆಯಿಂದ ಇನ್ನೋರ್ವ ಆರೋಪಿ ಮುರ್ಶಿದ್ ಅಲಿಯನ್ನು ಬಂಧಿಸಲಾಗಿದೆ. ಆತನ ಕೈಯಿಂದ ತಲಾ ಎರಡು ಪ್ಯಾಕೆಟ್‌ಗಳಲ್ಲಾಗಿ ತುಂಬಿಸಿಡಲಾಗಿದ್ದ ನಾಲ್ಕು ಕಿಲೋ ಗಾಂಜಾ ವಶಪಡಿಸಲಾಗಿದೆ. ಆತ ಇದನ್ನು ಬೆಂಗಳೂರಿನಿಂದ ಕಾರಿನಲ್ಲಿ ಕೇರಳಕ್ಕೆ ತಂದಿದ್ದ. ಹೀಗೆ ತರಲಾಗುವ ಗಾಂಜಾವನ್ನು ಪುಟ್ಟ ಪ್ಯಾಕೆಟ್‌ಗಳಲ್ಲಿ ತುಂಬಿಸಿ ಅದನ್ನು ವ್ಯಸನಿಗಳಿಗೆ ಮಾರಾಟ ಮಾಡುವುದು ಇವರ ರೀತಿಯಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.