ಕಿಡ್ನಿ ಅಸೌಖ್ಯ: ಬಾಲಕನ ಚಿಕಿತ್ಸೆಗಾಗಿ ‘ಮಾಧವಂ’ ಬಸ್ ಕಾರುಣ್ಯ ಯಾತ್ರೆ ಮೂಲಕ ಸಂಗ್ರಹಿಸಿದ ಮೊತ್ತ ಹಸ್ತಾಂತರ
ಮುಳ್ಳೇರಿಯ: ಎರಡೂ ಕಿಡ್ನಿಗಳು ವೈಫಲ್ಯಗೊಂಡ ಪರಿಣಾಮ ಚಿಕಿತ್ಸೆಯ ಲ್ಲಿರುವ ಬಾಲಕನ ಜೀವ ರಕ್ಷಿಸಲು ಕಾಸರಗೋಡು-ಮಂಞಂ ಪಾರೆ ರೂಟ್‌ನಲ್ಲಿ ಸಂಚರಿಸುವ ‘ಮಾಧವಂ’ ಬಸ್ ಇತ್ತೀಚೆಗೆ ನಡೆಸಿದ ಕಾರುಣ್ಯ ಯಾತ್ರೆ ಮೂಲಕ ಸಂಗ್ರಹವಾದ ಮೊತ್ತವನ್ನು ಚಿಕಿತ್ಸಾ ಸಹಾಯ ಸಮಿತಿಗೆ ಹಸ್ತಾಂತರಿಸಲಾಯಿತು.
ಮುಳ್ಳೇರಿಯ ಪಾರ್ಥಕೊಚ್ಚಿಯ ಕೂಲಿ ಕಾರ್ಮಿಕ ಶರತ್-ಅನುಪಮ ದಂಪತಿಯ ಪುತ್ರ ಶ್ರೇಯಸ್(11)ನ ಚಿಕಿತ್ಸೆಗೆ ಹಣ ಸಂಗ್ರಹಿಸುವ ಅಂಗವಾಗಿ ಕುಂಟಾರಿನ ಕುಶಲರ ಮಾಧವಂ ಬಸ್ ಕಾರುಣ್ಯ ಯಾತ್ರೆ ನಡೆಸಿತ್ತು. ಈ ಮೂಲಕ ಸಂಗ್ರಹವಾದ 33680 ರೂಪಾಯಿಗಳನ್ನು ಬಸ್‌ನ ಮಾಲಕರು ಬಾಲಕನ ತಂದೆ ಶರತ್‌ಗೆ ಹಸ್ತಾಂತರಿಸಿದರು. ಈ ವೇಳೆ ಬಿಜೆಪಿ ನೇತಾರ ಶಿವಕೃಷ್ಣ ಭಟ್, ಕಾರಡ್ಕ ಪಂ. ಸದಸ್ಯ ಸಂತೋಷ್, ಬಿಎಂಎಸ್ ನೇತಾರರಾದ ಎಂ.ಕೆ. ರಾಘವನ್, ಲೀಲಾಕೃಷ್ಣನ್, ಸದಾಶಿವನ್ ಪಿ. ಮೊದಲಾದವರಿದ್ದರು. ಶ್ರೇಯಸ್ ಮುಳ್ಳೇರಿಯ ವಿದ್ಯಾಶ್ರೀ ವಿದ್ಯಾಲಯದ ವಿದ್ಯಾರ್ಥಿ ಯಾಗಿದ್ದಾನೆ. ಎರಡೂ ಕಿಡ್ನಿಗಳು ವೈಫಲ್ಯ ಗೊಂಡ ಈತನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಅಗತ್ಯವಿದೆಯೆಂದು ವೈದ್ಯರು ತಿಳಿಸಿದ್ದಾರೆ. ಆದರೆ ಕೂಲಿ ಕಾರ್ಮಿಕನಾದ ಶರತ್‌ರಿಗೆ ಅಷ್ಟೊಂದು ಮೊತ್ತ ಸಂಗ್ರಹಿಸುವ ಸಾಮರ್ಥ್ಯವಿಲ್ಲ. ಆದ್ದರಿಂದ ಪುತ್ರನ ಜೀವ ರಕ್ಷಿಸಲು ದಾನಿಗಳ ಸಹಾಯ ವನ್ನು ಹೆತ್ತವರು ಆಗ್ರಹಿಸುತ್ತಿದ್ದಾರೆ.