ಕುಂಡಂಕುಳಿ ಜಿಬಿಜಿ ಠೇವಣಿ ವಂಚನೆ : ಕಣ್ಣೂರು ನಿವಾಸಿಗಳ ೧೦ ಲಕ್ಷರೂ. ವಂಚನೆ
ಕಾಸರಗೋಡು: ಕುಂಡಂಕುಳಿ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದ ಗ್ಲೋಬಲ್ ಬಿಸ್‌ನೆಸ್ ಗ್ರೂಪ್ (ಜಿಬಿಜಿ) ವಂಚನೆಗೆ ಸಂಬಂಧಿಸಿ ಬೇಡಗಂ ಪೊಲೀಸರು ಮತ್ತೊಂದು ಕೇಸು ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ ವಂಚನೆಗೆ ಸಂಬಂಧಿಸಿ ಬೇಡಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಪ್ರಕರಣಗಳ ಸಂಖ್ಯೆ ೨೨ಕ್ಕೇರಿದೆ.
ಕಣ್ಣೂರು ವೆಳ್ಳೋರ ವಿಲ್ಲೇಜ್‌ನ ಪೆರುಂಬಡವ್ ವೆಳ್ಳಿ ಪಳ್ಳಿಲ್ ನಿವಾಸಿ ಬಿನೇಶ್ ಮೈಕಲ್ ನೀಡಿದ ದೂರಿನಂತೆ ಈಗ ಕೇಸು ದಾಖಲಿಸಲಾಗಿದೆ. ಜಿಬಿಜಿ ಮೆನೇಜಿಂಗ್ ಡೈರೆಕ್ಟರ್ ಕುಂಡಂಕುಳಿಯ ಡಿ. ವಿನೋದ್ ಕುಮಾರ್ (೫೦), ಆಲಂಪಾಡಿ ನಾಲ್ತಡ್ಕದ ಮೊಹಮ್ಮದ್ ರಸಾಕ್ (೪೧) ಪಿಲಿಕ್ಕೋಡ್ ಮಲ್ಲಕ್ಕರದ ಸಿ. ಸುಭಾಶ್ (೪೭), ಕಂಪೆನಿ ಮೆನೇಜರ್ ಪೆರಿಯ ನಿಡುವೋಟ್ಟುಪಾರದ ಪಿ. ಗಂಗಾಧರನ್ ನಾಯರ್ (೬೬), ಮಾಣಿಯಾಟ್ ಪುದಿಯವಳಪ್ಪಿಲ್ ಹೌಸ್‌ನ ಪ್ರಜಿತ್ ಸಿ.ಪಿ (೪೦), ಮಾಣಿಯಾಟ್ ಪಡಿಂಞಾರ ವೀಟಿಲ್‌ನ ರಾಜೇಶ್ ಪಿ.ವಿ (೩೯), ಕುಂಡಂಕುಳಿ ತಾಯಂಬಕಂ ಕಾಂಪ್ಲೆಕ್ಸ್‌ನ ಡಿ. ವಿನೋದ್ ಕುಮಾರ್ (೫೦) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ.
ಮೆನೇಜಿಂಗ್ ಡೈರೆಕ್ಟರ್ ಹಗೂ ಡೈರೆಕ್ಟರ್‌ಗಳಾದ ಆರೋಪಿಗಳು ದೂರುಗಾರ, ಪತ್ನಿ, ತಂದೆ, ತಾಯಿಯನ್ನು ಕಂಪೆನಿಗೆ ಸೇರಿಸಿ ಸದಸ್ಯತ್ವ ನೀಡಿದ ಬಳಿಕ ಠೇವಣಿ ಪಡೆದು ವಂಚಿಸಲಾಯಿತೆಂದು ಕೇಸು ದಾಖಲಿಸಲಾಗಿದೆ.
ತಂದೆಯಿಂದ ೨ ಲಕ್ಷ ರೂಪಾಯಿ, ದೂರುಗಾರನಿಂದ ೧ ಲಕ್ಷ ರೂಪಾಯಿ, ಪತ್ನಿ ಹೆಸರಲ್ಲಿ ಎರಡೂವರೆ ಲಕ್ಷ ರೂ., ತಾಯಿ ಹೆಸರಲ್ಲಿ ೫ ಲಕ್ಷ ರೂಪಾಯಿ ಪಡೆದ ಬಳಿಕ ಮರಳಿ ನೀಡದೆ ವಂಚಿಸಲಾಯಿತೆಂದು ದೂರಲಾಗಿದೆ. ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದ ನಿರ್ದೇಶ ಪ್ರಕಾರ ಬೇಡಗಂ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ಈ ಹಿಂದೆ ದಾಖಲಿಸಿಕೊಂಡ ಪ್ರಕರಣಗಳಲ್ಲಿ ಸೆರೆಗೀಡಾದ ವಿನೋದ್ ಕುಮಾರ್ ಸಹಿತ ಆರೋಪಿಗಲು ಹಲವು ವಾರಗಳ ಕಾಲ ರಿಮಾಂಡ್‌ನಲ್ಲಿದ್ದರು.