ಕುಂಬ್ಡಾಜೆ-ನೇರಪ್ಪಾಡಿ ತೂಗುಸೇತುವೆ ಜೀರ್ಣಗೊಂಡು ಕುಸಿಯುವ ಹಂತದಲ್ಲಿ
ಕುಂಬ್ಡಾಜೆ: ತೂಗುಸೇತುವೆ ಯೊಂದು ಯಾವುದೇ ಸಂದರ್ಭದಲ್ಲಿ ಮುರಿದು ಬಿದ್ದು ಅಪಾಯ ಸಂಭವಿಸುವ ಸ್ಥಿತಿಯಲ್ಲಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದಾಗಿ ಸ್ಥಳೀಯರು ದೂರಿದ್ದಾರೆ. ಕುಂಬ್ಡಾಜೆ ಹಾಗೂ ನೇರಪ್ಪಾಡಿಯನ್ನು ಸಂಪರ್ಕಿಸುವ ನೇರಪ್ಪಾಡಿ ಸೇತುವೆ ಹಲವು ಕಾಲದಿಂದ ತುಕ್ಕು ಹಿಡಿದು ನಾಶವಾಗಿ ಇರುವುದು ಕಂಡು ಬರುತ್ತಿದೆ. ಹಲವಾರು ಮಂದಿ ಹಾಗೂ ಶಾಲಾ ವಿದ್ಯಾರ್ಥಿಗಳು ದಿನನಿತ್ಯ ಈ ತೂಗು ಸೇತುವೆಯಲ್ಲಿ ಸಂಚರಿಸುತ್ತಿದ್ದು, ಇದು ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಸಾಧ್ಯತೆ ಇದೆ. ತುಕ್ಕು ಹಿಡಿದು ಜೀರ್ಣಗೊಂಡ ತಂತಿಗಳಲ್ಲಿ ನೇತಾಡುತ್ತಿರುವ ತೂಗುಸೇತುವೆಯಲ್ಲಿ ದಿನಂಪ್ರತಿ 100ಕ್ಕೂ ಅಧಿಕ ಮಂದಿ ಸಂಚರಿಸುತ್ತಿ ದ್ದಾರೆ. ಈ ಹಿನ್ನೆಲೆಯಲ್ಲಿ ಅಪಾಯ ಸಂಭವಿಸಿದರೆ ಅದೊಂದು ದೊಡ್ಡ ದುರಂತವಾಗಿ ಪರಿಣಮಿಸುವ ಸಾಧ್ಯತೆ ಇದೆ. ಅದಕ್ಕೂ ಮುಂಚಿತವಾಗಿ ಅಧಿಕಾ ರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.