ಕುಸಿದು ನಿಂತಿರುವ ಉರ್ಮಿ ಸಂಕ ವಾಹನ ಸಂಚಾರ ಮೊಟಕು
ಪೈವಳಿಕೆ: ಲಾಲ್ಬಾಗ್-ಕೊಮ್ಮಂ ಗಳ ಲೋಕೋಪಯೋಗಿ ರಸ್ತೆಯ ಉರ್ಮಿ ಎಂಬಲ್ಲಿ ತೋಡಿಗೆ ನಿರ್ಮಿಸಿದ ಸಂಕದ ಒಂದು ತುದಿಯ ಆಧಾರ ಕಂಬ ಕುಸಿದು ನಿಂತಿದ್ದು, ಯಾವುದೇ ಕ್ಷಣ ಧರಾಶಾಯಿ ಯಾಗುವ ಸಾಧ್ಯತೆಯಿದೆಯೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಶನಿವಾರ ಸಂಕದ ಕಂಬ ಕುಸಿದಿದೆ. ಮಣ್ಣಿಗೆ ಒರಗಿ ಸಂಕ ಇದೀಗ ನಿಂತಿದ್ದು, ಯಾವುದೇ ಕ್ಷಣ ಕುಸಿಯುವ ಸಾಧ್ಯತೆಯಿದೆ. ಆಧಾರಕಂಬವನ್ನು ಶೀಘ್ರ ದುರಸ್ತಿಗೊಳಿ ಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯೆಂದು ಸ್ಥಳೀಯರು ತಿಳಿಸಿದ್ದಾರೆ.
ಪೈವಳಿಕೆ, ಮೀಂಜ ಪಂಚಾಯತ್ ಗಳನ್ನು ಸಂಪರ್ಕಿಸುವ ರಸ್ತೆ ಇದಾಗಿದೆ. ಈ ಮೂಲಕ ಈಗ ದೊಡ್ಡ ವಾಹನಗಳ ಸಂಚಾರ ಮೊಟಕುಗೊಂಡಿದೆ. ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದರೂ ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಲಾಲ್ಬಾಗ್ ನಿಂದ ಕೊಮ್ಮಂಗಳ, ಬದಿಯಾರು, ಪಲ್ಲೆಕೂಡಲ್ ಮೊದಲಾದ ಪ್ರದೇಶಗಳಿಗೆ ಈಗ ಸುತ್ತಿ ಬಳಸಿ ಬಾಯಿಕಟ್ಟೆ, ಕುರುಡಪದವು ಮೂಲಕ ಸಂಚರಿಸಬೇಕಾಗುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪ್ರತಿನಿಧಿ ಶ್ರೀನಿವಾಸ ಭಂಡಾರಿ ಆಗ್ರಹಿಸಿದ್ದಾರೆ.