ಕ್ಷಯಿಸುತ್ತಿರುವ ಸೇತುವೆ ದುರಸ್ತಿಯಿಲ್ಲ: ಸಂಚಾರಕ್ಕೆ ಆತಂಕ ಸೃಷ್ಟಿ
ಬೆಳ್ಳೂರು : ಕೇರಳ ಹಾಗೂ ಕರ್ನಾಟಕದ ಗಡಿಪ್ರದೇಶವನ್ನು ನಿರ್ಧರಿಸುವ ಸೇತುವೆಯೊಂದು ಅಭಿವೃದ್ಧಿಯಿಲ್ಲದೆ ದಿನದಿಂದ ದಿನಕ್ಕೆ ಕ್ಷಯಿಸುತ್ತಿದ್ದು, ಇದರಿಂದ ಸಂಚಾರಕ್ಕೆ ಆತಂಕ ದುರಾಗಿದೆ.
ಬೆಳ್ಳೂರು ಪಂಚಾಯತ್ ವ್ಯಾಪ್ತಿಯ ಕಾಯರ್ ಪದವು ನಲ್ಲಿರುವ ಸೇತುವೆಯ ಸ್ಥಿತಿ ಇದಾಗಿದೆ. ಕಾಂಗ್ರೆಸ್ ನೇತಾರ ಜನಾರ್ದನ ಪೂಜಾರಿಯವರು ಕೇಂದ್ರ ಸಚಿವ ರಾಗಿದ್ದ ವೇಳೆ ಈ ಸೇತುವೆ ನಿರ್ಮಿಸಲಾಗಿದೆ. ಅನಂತರ ರಸ್ತೆಯ ಅಭಿವೃದ್ಧಿ ಮಾತ್ರವೇ ನಡೆದಿದೆ. ಆದರೆ ಸೇತುವೆ ದುರಸ್ತಿಗೆ ಕ್ರಮ ಉಂಟಾಗಿಲ್ಲ .
ಈ ಸೇತುವೆಯ ಈಚೆಗೆ ಕೇರಳ, ಆಚೆಭಾಗ ಕರ್ನಾಟಕವಾಗಿದೆ. ಬದಿಯಡ್ಕ- ಕಾಯರ್ ಪದವು ಮಲೆನಾಡು ರಸ್ತೆ ಈ ಸೇತುವೆ ಬಳಿ ಕೊನೆಗೊಳ್ಳುತ್ತದೆ. ಸೇತುವೆಯ ಆಚೆಭಾಗ ಒಂದು ಕಿಲೋ ಮೀಟರ್ ಸಂಚರಿಸಿದರೆ ಸುಳ್ಯಪದವು ಎಂಬ ಪ್ರಸಿದ್ದ ಸ್ಥಳಕ್ಕೆ ತಲುಪುತ್ತದೆ. ಸೇತುವೆಯ ಈಚೆ ಭಾಗದ ಮಕ್ಕಳು ಶಿಕ್ಷಣಕ್ಕೆ ಸುಳ್ಯಪದವು, ಪುತ್ತೂರು ಕಡೆಗೆ ಇದೇ ರಸ್ತೆಯಲ್ಲಿ ತೆರಳುತ್ತಾರೆ. ಅದೇ ರೀತಿ ಮುಳ್ಳೇರಿಯ, ಬೆಳ್ಳೂರು ಭಾಗದ ಮಂದಿ ಕರ್ನಾಟಕದ ಪುತ್ತೂರು, ಈಶ್ವರಮಂಗಲ ಮೊದಲಾದೆಡೆಗೆ ತೆರಳಲು ಸುಳ್ಯಪದವು ಮೂಲಕ ಸಂಚರಿಸುತ್ತಾರೆ. ಪ್ರಸ್ತುತ ಕಾಸರಗೋಡಿನಿಂದ ಸುಳ್ಯಪದವಿಗೆ ಬಸ್ಗಳ ಸೌಕರ್ಯವಿದೆ. ಇದೀಗ ಈ ಸೇತುವೆ ಮೇಲೆ ಹೊಂಡಗಳು ಸೃಷ್ಟಿಯಾಗಿದೆ . ಮಾತ್ರವಲ್ಲ ಅಗಲ ಕಿರಿದಾದ ಸೇತುವೆ ಮೇಲೆ ಏಕಕಾಲದಲ್ಲಿ ಒಂದು ಘನವಾಹನಕ್ಕೆ ಮಾತ್ರ ಸಂಚರಿಸ ಬಹುದಾಗಿದೆ. ಇದರಿಂದ ಇಲ್ಲಿ ಸಮಸ್ಯೆ ಸೃಷ್ಟಿಯಾ ಗುವುದು ನಿತ್ಯ ಘಟನೆಯಾಗಿದೆ ಎಂದು ಸ್ಥಳೀಯರು ತಿಳಿಸುತ್ತಿದಾರೆ.