ಜನವರಿ ಒಂದರಿಂದ ಪೊಲೀಸ್ ಠಾಣೆಗಳ ಸಾರಥ್ಯ ಮತ್ತೆ ಎಸ್ಐಗಳಿಗೆ
ಕಾಸರಗೋಡು: ರಾಜ್ಯದ ಪೊಲೀಸ್ ಠಾಣೆಗಳ ಠಾಣಾಧಿಕಾರಿ (ಎಸ್ಎಚ್ಒ) ಹೊಣೆಗಾರಿಕೆ ಜನವರಿ ಒಂದರಿಂದ ವರ್ಷಗಳ ಹಿಂದೆ ಇದ್ದಹಾಗೆ ಮತ್ತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಎಸ್ಐ)ಗಳ ಕೈಸೇರಲಿದೆ. ಆ ಮೂಲಕ ಠಾಣೆಗಳ ಆಡಳಿತ ಪೂರ್ಣವಾಗಿ ಎಸ್ಐಗಳ ಹಿಡಿತಕ್ಕೆ ಬರಲಿದೆ. ವರ್ಷಗಳ ಹಿಂದೆ ಎಸ್.ಐಗಳು ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳಾಗಿ ಸೇವೆ ನಿರ್ವಹಿಸುತ್ತಿದ್ದರು. ಬಳಿಕ ಆ ಸಂಪ್ರದಾಯವನ್ನು ಕೈಬಿಟ್ಟು ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಪೊಲೀಸ್ ಠಾಣೆಗಳ ಠಾಣಾಧಿಕಾರಿ ಗಳನ್ನಾಗಿ ನೇಮಿಸಲಾಗಿತ್ತು. ಆದರೆ ಇಂತಹ ಕ್ರಮದಿಂದ ನಿರೀಕ್ಷಿತ ಫಲ ಉಂಟಾಗಿಲ್ಲವೆಂದು ಆ ಬಗ್ಗೆ ಡಿಜಿಪಿ ಕೆ. ಪದ್ಮಕುಮಾರ್ರ ನೇತೃತ್ವದ ಸಮಿತಿ ನಡೆಸಿದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿತ್ತು. ಅದನ್ನು ಪರಿಗಣಿಸಿದ ರಾಜ್ಯ ಸರಕಾರ ಪೊಲೀಸ್ ಠಾಣೆಗಳ ಆಡಳಿತವನ್ನು ಮತ್ತೆ ಎಸ್.ಐಗೆ ವಹಿಸುವ ಈ ಹೊಸ ತೀರ್ಮಾನ ಕೈಗೊಂಡಿದೆ.
ಇದರಂತೆ ಮೊದಲ ಹಂತದಲ್ಲಿ ಇನ್ಸ್ಪೆಕ್ಟರ್ಗಳು ಈಗ ಠಾಣಾಧಿಕಾರಿಗಳಾಗಿರುವ ಪೊಲೀಸ್ ಠಾಣೆಗಳ ಪೈಕಿ ಶೇ. ೫೦ಷ್ಟು ಠಾಣೆಗಳ ಠಾಣಾಧಿಕಾರಿಗಳ ಹೊಣೆಗಾರಿಕೆಯನ್ನು ಎಸ್.ಐಗಳಿಗೆ ವಹಿಸಿಕೊಡಲಾಗುವುದು. ಅಂದರೆ ಕಡಿಮೆ ಸಂಖ್ಯೆಯಲ್ಲಿ ಪ್ರಕgಣಗಳು ದಾಖಲುಗೊಳ್ಳುತ್ತಿರುವ ಪೊಲೀಸ್ ಠಾಣೆಗಳ ಠಾಣಾಧಿಕಾರಿ ಹೊಣೆಗಾರಿಕೆಯನ್ನು ಪ್ರಥಮ ಹಂತದಲ್ಲಿ ಎಸ್.ಐಗಳಿಗೆ ವಹಿಸಿಕೊಡಲಾಗುವುದು. ದೊಡ್ಡ ನಗರಗಳನ್ನು ಹೊರತುಪಡಿಸಿ ಇತರ ಪೊಲೀಸ್ ಠಾಣೆಗಳ ಹೊಣೆಗಾರಿಕೆಯನ್ನು ಮಾತ್ರವೇ ಎಸ್.ಐಗಳಿಗೆ ವಹಿಸಿಕೊಡುವ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ೪೭೮ ಪೊಲೀಸ್ ಠಾಣೆಗಳ ಎಸ್ಎಚ್ಒ ಗಳು ಈಗ ಇನ್ಸ್ಪೆಕ್ಟರ್ಗಳಾಗಿದ್ದಾರೆ. ಇದರಲ್ಲಿ ೨೧೦ ಪೊಲೀಸ್ ಠಾಣೆಗಳ ಹೊಣೆಗಾರಿಕೆಯನ್ನು ಜನವರಿ ತಿಂಗಳಿಂದ ಎಸ್.ಐಗಳಿಗೆ ವಹಿಸಿಕೊ ಡುವ ತೀರ್ಮಾನ ಕೈಗೊಳ್ಳಲಾಗಿದೆ.
ಎಸ್ಎಚ್ಒ ಸ್ಥಾನ ಕಳೆದುಕೊಳ್ಳಬೇಕಾಗಿ ಬರುವ ಇನ್ಸ್ಪೆಕ್ಟರ್ಗಳಿಗೆ ಸೈಬರ್, ಪೋಕ್ಸೋ, ಆರ್ಥಿಕ ವಂಚನೆ ಅಪರಾಧ ಪ್ರಕರಣಗಳು ಇತ್ಯಾದಿಗಳ ತನಿಖಾ ಹೊಣೆಗಾರಿಕೆ ವಹಿಸಿಕೊಡಲಾಗುವುದು.
ಇನ್ನು ಕಾಸರಗೋಡು ಜಿಲ್ಲೆಯಲ್ಲಿ ಕಾಸರಗೋಡು ಪೊಲೀಸ್ ಠಾಣೆ, ಮಂಜೇಶ್ವರ, ಹೊಸದುರ್ಗ ಮತ್ತು ಚಂದೇರ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳಾಗಿ ಇನ್ಸ್ಪೆಕ್ಟರ್ ಗಳು ಈಗಿನ ಅದೇ ರೀತಿಯಲ್ಲಿ ಇನ್ನೂ ಮುಂದುವರಿಯಲಿದೆ. ಜಿಲ್ಲೆಯ ಇತರ ಎಲ್ಲಾ ಪೊಲೀಸ್ ಠಾಣೆಗಳ ಹೊಣೆಗಾರಿಕೆ ಜನವರಿಯಿಂದ ಎಸ್.ಐಗಳಿಗೆ ಹೋಗಿ ಸೇರಲಿದೆ.