ಜೋಡುಕಲ್ಲು ರಸ್ತೆ ಬದಿ ವಾಲಿನಿಂತ ವಿದ್ಯುತ್ ಕಂಬದಿಂದ ಅಪಾಯ ಆಹ್ವಾನ
ಉಪ್ಪಳ: ದಿನನಿತ್ಯ ನೂರಾರು ವಾಹನ, ಶಾಲಾ ವಿದ್ಯಾರ್ಥಿಗಳು ಸಂಚರಿಸುವ ಜನನಿಬಿಡ ಪ್ರದೇಶವಾದ ರಸ್ತೆಯ ಬದಿಯಲ್ಲಿ ಯಾವುದೇ ಕ್ಷಣ ಕುಸಿದು ಬೀಳಲು ಸಿದ್ಧವಾಗಿರುವ ವಿದ್ಯುತ್ ಕಂಬವೊಂದಿದೆ. ಇದು ಅಪಾಯ ಆಹ್ವಾನಿಸುತ್ತಿದೆ. ಕೈಕಂಬ- ಬಾಯಾರು ರಸ್ತೆಯ ಜೋಡುಕಲ್ಲು- ಪಂಜಿಪಳ್ಳ ಮಧ್ಯೆ ರಸ್ತೆ ಬದಿಯಲ್ಲಿ ಭೀತಿ ಸೃಷ್ಟಿಸುವ ರೀತಿಯಲ್ಲಿ ವಿದ್ಯುತ್ ಕಂಬ ವಾಲಿ ನಿಂತಿದೆ. ಈ ಕಂಬವನ್ನು ಸರಿಪಡಿಸಲು ಸ್ಥಳೀಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಇತ್ತ ಕಡೆ ಗಮನ ಹರಿಸುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಗಾಳಿ ಮಳೆ ತೀವ್ರಗೊಳ್ಳುವ ಸಂದರ್ಭಗಳಲ್ಲಿ ಕಂಬ ಬೀಳಲು ಸಾಧ್ಯವಿದ್ದು, ಅನಾಹುತಕ್ಕೆ ಆಹ್ವಾನ ನೀಡಿದಂತಾಗಬಹುದೆಂದು ಸ್ಥಳೀಯರು ತಿಳಿಸಿದ್ದಾರೆ. ವಾಲಿ ನಿಂತ ಕಂಬವನ್ನು ಕೂಡಲೇ ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.