ಜ್ವರ ಬಾಧಿಸಿ ಆಸ್ಪತ್ರೆಗೆ ತಲುಪಿದ ಯುವಕನ ಎರಡೂ ಕೈಗಳಿಗೆ ಕೊಯ್ದು ಗಾಯ- ದೂರು
ಕುಂಬಳೆ: ಜ್ವರ ತಗಲಿ ಚಿಕಿತ್ಸೆಗೆಂದು ತಲುಪಿದ ಯುವಕನ ಎರಡೂ ಕೈಗಳನ್ನು ಕೊಯ್ದು ಗಾಯಗೊಳಿಸಿದ ಬಗ್ಗೆ ಆರೋಪವುಂಟಾಗಿದೆ. ಕುಂಬಳೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ. ಒಂದು ವಾರದ ಹಿಂದೆ ಕಿಳಿಂಗಾರು ಕಕ್ಕಳದ ರಂಜಿತ್ ಎಂಬವರನ್ನು ಜ್ವರ ತಗಲಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇವರಿಗೆ ಡೆಂಗ್ಯು ಜ್ವರ ತಗಲಿರುವುದಾಗಿ ವೈದ್ಯರು ತಿಳಿಸಿದ್ದು, ಅದಕ್ಕಿರುವ ಚಿಕಿತ್ಸೆ ನೀಡಿರುವುದಾಗಿ ಹೇಳಲಾಗುತ್ತಿದೆ. ಚಿಕಿತ್ಸೆ ಮಧ್ಯೆ ಬಾತುಕೊಂಡ ಎರಡೂ ಕೈಗಳನ್ನು ಸಿಬ್ಬಂದಿಗಳು ಕೊಯ್ದು ಗಾಯಗೊಳಿಸಿ ಅನಂತರ ಅದಕ್ಕೆ ಔಷಧ ಹಚ್ಚಿ ಕಟ್ಟಲಾಗಿದೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿದು ನಾಗರಿಕರು ಆಸ್ಪತ್ರೆಗೆ ತಲುಪಿ ತನಿಖೆ ನಡೆಸಿದ್ದು, ಈ ವೇಳೆ ವಾಗ್ವಾದ ಉಂಟಾಗಿರುವುದಾಗಿ ದೂರಲಾಗಿದೆ. ಈ ಹಿನ್ನೆಲೆಯಲ್ಲಿ ರಂಜಿತ್‌ರ ಕೈಗಳಿಗೆ ಉಂಟಾದ ಗಾಯ ಒಣಗುವವರೆಗೆ ಹಣ ಪಡೆಯದೆ ಚಿಕಿತ್ಸೆ ನೀಡಲಾಗುವುದೆಂದು ರೋಗಾಣು ಸೋಂಕು ಉಂಟಾಗದಿರಲು ಬೇರೆಯವರನ್ನು ರಂಜಿತ್‌ರ ಭೇಟಿಗೆ ಕಳುಹಿಸುವಂತಿಲ್ಲವೆಂದು ಅಧಿಕಾರಿಗಳು ತಿಳಿಸಿದರು. ಘಟನೆ ಬಗ್ಗೆ ವಿಷಯ ಬೇರೆ ಯಾರಿಗೂ ತಿಳಿಯಕೂಡದೆಂದು ಅಧಿಕಾರಿಗಳು ತಿಳಿಸಿದ್ದಾರೆನ್ನಲಾಗಿದೆ. ಡ್ರಿಪ್ ಇಡಲು ನರ ಪತ್ತೆಯಾಗದಿರುವುದರಿಂದ ಸೂಜಿಯನ್ನು ನೇರವಾಗಿ ಮಾಂಸಕ್ಕೆ ಚುಚ್ಚಿ ಡ್ರಿಪ್ ನೀಡಿರುವುದೇ ರೋಗಿ ಅಸ್ವಸ್ಥನಾಗಲು ಕಾರಣವೆಂದು ಹೇಳಲಾಗುತ್ತಿದೆ.