ತಂಡದ ಹಲ್ಲೆಯಿಂದ ಯುವಕ ಸಾವು: ತಲೆಮರೆಸಿಕೊಂಡ ಆರೋಪಿಗಳ ಪತ್ತೆಗಾಗಿ ಕ್ರಮ ಆರಂಭ
ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿ ಕೊಂಡ ಆರೋಪಿಗಳ ಪತೆಗಾಗಿ ರೆಡ್ ಕಾರ್ನರ್ ನೋಟೀಸು ಹೊರಡಿಸಲು ಪೊಲೀಸರು ಕ್ರಮ ಆರಂಭಿಸಿದ್ದಾರೆ.
ಮೀಯಪದವು ಮದಕ್ಕಳದ ಮೊಯ್ದೀನ್ ಆರಿಫ್ (೨೨) ಎಂಬವರ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗಾಗಿ ಕ್ರಮ ಆರಂಭಿಸಲಾಗಿದೆ. ಇದರ ಅಂಗವಾಗಿ ಪ್ರಕರಣದ ತನಿಖೆ ನಡೆಸುವ ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ರಾಜೀವ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.
ಮೊಯ್ದೀನ್ ಆರಿಫ್ನ್ನು ಮಾರ್ಚ್ ೪ರಂದು ತಂಡವೊಂದು ನಡೆಸಿದ ಹಲ್ಲೆಯಿಂದ ಕೊಲೆಗೀಡಾಗಿ ದ್ದರು. ಗಾಂಜಾದ ಮತ್ತಿನಲ್ಲಿ ಬೊಬ್ಬಿಟ್ಟನೆಂಬ ಆರೋಪದಂತೆ ಮೊಯ್ದೀನ್ ಆರಿಫ್ನನ್ನು ಮಾರ್ಚ್ ೩ರಂದು ಪೊಲೀಸರು ಕಸ್ಟಡಿಗೆ ತೆಗೆದಿದ್ದರು. ಅಂದು ರಾತ್ರಿಯೇ ಸಂಬಂಧಿಕನೋರ್ವ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಆತನನ್ನು ಕರೆದೊಯ್ದಿದ್ದನು. ಅನಂತರ ಮೊಯ್ದೀನ್ ಆರಿಫ್ನನ್ನು ಬೈಕ್ನಲ್ಲಿ ಹತ್ತಿಸಿ ತೂಮಿನಾಡು ಮೈದಾನಕ್ಕೆ ತಲಪಿಸಿದ ತಂಡ ಅಲ್ಲಿ ಹಲ್ಲೆಗೈದು ಗಂಭೀರ ಗಾಯಗೊಳಿಸಿತ್ತು. ಅನಂತರ ಮೊಯ್ದೀನ್ ಆರಿಫ್ನನ್ನು ಮನೆಗೆ ತಲುಪಿಸಿ ತಂಡ ಮರಳಿತ್ತು. ಮರುದಿನ ಬೆಳಿಗ್ಗೆ ಮೊಯ್ದೀನ್ ಆರಿಫ್ ರಕ್ತವಾಂತಿ ಮಾಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದ್ದು, ಆದರೆ ಅಲ್ಲಿ ಆತ ಮೃತಪಟ್ಟಿದ್ದನು. ನಾಗರಿಕರ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ತನಿಖಯಲ್ಲಿ ತಂಡ ನಡೆಸಿದ ಹಲ್ಲೆಯೇ ಯುವಕನ ಸಾವಿಗೆ ಕಾರಣವೆಂದು ತಿಳಿದುಬಂದಿತ್ತು. ಘಟನೆಗೆ ಸಂಬಂಧಿಸಿ ಪೊಲೀಸರು ೯ ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ. ಈ ಪೈಕಿ ಕಣ್ವತೀರ್ಥ ಇರ್ಷಾದ್ ಮಂಜಿಲ್ನ ಅಬ್ದುಲ್ ರಶೀದ್ (೨೮), ಕುಂಜತ್ತೂರು ಕಣ್ವತೀರ್ಥ ರೈಲ್ವೇ ಗೇಟ್ ಬಳಿಯ ನಿವಾಸಿಗಳಾದ ಶೌಕತ್ತಲಿ (೩೯), ಅಬೂಬಕರ್ ಸಿದ್ದಿಕ್ (೩೩) ಎಂಬಿವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡ ಆರು ಮಂದಿ ಆರೋಪಿಗಳಲ್ಲಿ ಇಬ್ಬರು ಗಲ್ಫ್ಗೆ ಪರಾರಿಯಾಗಿ ದ್ದಾರೆಂದು ತಿಳಿದುಬಂದಿದೆ.
ಬಂಧಿತರಾದ ಮೂರು ಮಂದಿ ಆರೋಪಿಗಳಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಇತ್ತೀಚೆಗೆ ಆರೋಪಿಗಳನ್ನು ರಿಮಾಂಡ್ನಿಂದ ಕಸ್ಟಡಿಗೆ ತೆಗೆದುಕೊಂಡು ಪೊಲೀಸರು ಮಾಹಿತಿ ಸಂಗ್ರಹಿಸಿ ಬಳಿಕ ಮತ್ತೆ ನ್ಯಾ ಯಾಲಯಕ್ಕೆ ಹಾಜರುಪಡಿಸಿದ್ದಾರೆ.