ತಡರಾತ್ರಿ ಮನೆಯ ಕಿಟಿಕಿ ಗಾಜಿಗೆ ತಗಲಿದ ಗುಂಡು: ಭಾರೀ ಆತಂಕ ಸೃಷ್ಟಿ; ಸಮಗ್ರ ತನಿಖೆ
ಕಾಸರಗೋಡು: ತಡರಾತ್ರಿ ಮನೆಯ ಕಿಟಿಕಿ ಗಾಜಿಗೆ ಗುಂಡು ತಗಲಿ ಅದು ಭಾರೀ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.
ಚೀಮೇನಿ ತೆರೆದ ಬಂಧೀ ಖಾನೆಯ ಬಳಿಯ ತುರು ನಿವಾಸಿ ಎ.ಟಿ.ವಿ ಪದ್ಮನಾಭನ್ ಎಂಬವರ ಮನೆಯ ಕಿಟಿಕಿ ಬಾಗಿಲಿನ ಗಾಜಿಗೆ ಗುಂಡು ತಗಲಿದೆ. ಇದು ಕಾಡು ಹಂದಿಗಳ ಉಪಟಳವಿರುವ ಪ್ರದೇಶವಾಗಿದೆ. ಆದ್ದರಿಂದ ರಾತ್ರಿ ಕಾಡು ಹಂದಿಗಳನ್ನು ಬೇಟೆಯಾ ಡಲು ಬಂದ ತಂಡ ಗುಂಡು ಹಾರಿಸಿದಾಗ ಅದು ಗುರಿತಪ್ಪಿ ಮನೆಗೆ ತಗಲಿರಬಹುದೆಂದು ಶಂಕಿಸಲಾಗಿದೆ. ಪದ್ಮನಾಭನ್ ಮಲಗುತ್ತಿರುವ ಕೊಠಡಿಯ ಕಿಟಿಕಿ ಬಾಗಿಲಿಗೆ ಗುಂಡು ತಗಲಿದೆ. ಗುಂಡು ತಗಲಿದ ಶಬ್ದ ಕೇಳಿ ಭಯಗೊಂಡ ಪದ್ಮ ನಾಭನ್ ಮತ್ತು ಪತ್ನಿ ಎಚ್ಚೆತ್ತು ಹೊರ ಬಂದು ನೋಡಿದಾಗ ಬುಲ್ಲೆಟ್ ರೂಪದ ವಸ್ತು ಅಲ್ಲಿ ಪತ್ತೆಯಾಗಿದೆ. ರಾತ್ರಿ ವೇಳೆ ಈ ಪ್ರದೇಶದಲ್ಲಿ ಪದೇ ಪದೇ ಗುಂಡು ಹಾರಿಸುವ ಶಬ್ದಗಳು ಕೇಳಿ ಬರುತ್ತಿದೆ ಎಂದು ಮನೆಯವರು ಹೇಳುತ್ತಿದ್ದಾರೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆ ಮನೆಯಲ್ಲಿ ಪತ್ತೆಯಾದ ಬುಲ್ಲೆಟ್ ಮಾದರಿಯ ವಸ್ತುವನ್ನು ಪರಿಶೀಲಿಸಿದಾಗ ಅದು ಬಂಧೂಕಿಗೆ ಉಪಯೋಗಿಸುವ ವಸ್ತುವಲ್ಲವೆಂಬುವುದು ಸ್ಪಷ್ಟಗೊಂಡಿದೆ. ಆದ್ದರಿಂದ ಅದನ್ನು ವೈಜ್ಞಾನಿಕ ಪರೀಕ್ಷೆಗಾಗಿ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ಗುಂಡು ಹಾರಾಟದ ಬಗ್ಗೆ ಮನೆಯವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಆರಂಭಿಸಿದ್ದಾರೆ.
ಅರಣ್ಯ ಇಲಾಖೆಯವರೂ ಈ ಬಗ್ಗೆ ಇನ್ನೊಂದೆಡೆ ಸಮಾನಾಂತರ ತನಿಖೆ ಆರಂಭಿಸಿದ್ದಾರೆ.