ತೋಡಿನಲ್ಲಿ ನಾಪತ್ತೆಯಾದ ಸಿಪಿಐ ನೇತಾರನ ಮೃತದೇಹ ಪತ್ತೆ
ಬದಿಯಡ್ಕ: ತೋಡಿನಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಸಿಪಿಐ ಲೋಕಲ್ ಸಮಿತಿ ಸದಸ್ಯ, ಬಾಂಜತ್ತಡ್ಕ ನಿವಾಸಿ ಸೀತಾರಾಮ (52) ಎಂಬವರ ಮೃತದೇಹ ನಿನ್ನೆ ಸಂಜೆ ಶಿರಿಯ ಹೊಳೆಯ ಅಳಿವೆ ಬಾಗಿಲಿನಲ್ಲಿ ಪತ್ತೆಯಾಗಿದೆ. ನಿನ್ನೆ ಸಂಜೆ ಮೃತದೇಹ ಹೊಳೆಯಲ್ಲಿ ತೇಲುತ್ತಿರುವುದನ್ನು ಕಂಡ ನಾಗರಿಕರು ನೀಡಿದ ಮಾಹಿತಿಯಂತೆ ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್ಐ ಶ್ರೀಜೇಶ್ ಹಾಗೂ ಕೋಸ್ಟಲ್ ಪೊಲೀಸರು ಸ್ಥಳಕ್ಕೆ ತಲುಪಿದ್ದರು. ಬಳಿಕ ನಾಗರಿಕರ ಸಹಾಯದೊಂದಿಗೆ ಮೃತದೇಹವನ್ನು ಹೊಳೆಯಿಂದ ಮೇಲಕ್ಕೆತ್ತಲಾಯಿತು. ಸ್ಥಳಕ್ಕೆ ತಲುಪಿದ ಸಂಬಂಧಿಕರು ಮೃತ ವ್ಯಕ್ತಿಯ ಗುರುತು ಹಚ್ಚಿದ ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಯಿತು. ಇಂದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಗುವುದು.
ಬುಧವಾರ ಸಂಜೆ ಹುಲ್ಲು ತರಲೆಂದು ತೆರಳಿದ್ದ ಸೀತಾರಾಮ ಮರಳಿ ಬಂದಿರಲಿಲ್ಲ. ಇದರಿಂದ ಶೋಧ ನಡೆಸಿದಾಗ ತೋಡಿನಲ್ಲಿ ನೀರಿನ ಸೆಳೆತಕ್ಕೆ ಸಿಲುಕಿರುವುದಾಗಿ ಸಂಶಯಿಸಲಾಗಿತ್ತು. ಅವರ ಕತ್ತಿ, ಚಪ್ಪಲಿ ತೋಡಿನ ಬದಿಯಲ್ಲಿ ಕಂಡುಬಂದಿತ್ತು. ಇದರಂತೆ ಮೊನ್ನೆ ಬದಿಯಡ್ಕ ಪೊಲೀಸರು, ಅಗ್ನಿಶಾಮಕದಳ ತಲುಪಿ ಸಮೀಪದ ಹೊಳೆಯಲ್ಲಿ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ.
ಮೃತರು ಪತ್ನಿ ಲಕ್ಷ್ಮಿ, ಮಕ್ಕಳಾದ ಸುಮಲತ, ಸತ್ಯಪ್ರಕಾಶ್, ಸಹೋದರ-ಸಹೋದರಿಯರಾದ ಶಿವಪ್ಪ, ಸುಂದರ, ಭಾಸ್ಕರ, ರತ್ನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ನಾರಾಯಣ ಈ ಹಿಂದೆ ನಿಧನಹೊಂದಿದ್ದಾರೆ.