ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದು ವಂಚಿಸಿದ ಪ್ರಕರಣ: ಆರೋಪಿ ವಿಮಾನ ನಿಲ್ದಾಣದಿಂದ ಸೆರೆ
ಕಾಸರಗೋಡು: ಬ್ಯಾಂಕ್ನಲ್ಲಿ ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದು ವಂಚನೆಗೈದ ಪ್ರಕರಣದ ಆರೋಪಿ ಗಲ್ಫ್ ನಿಂದ ಹಿಂತಿರುಗುತ್ತಿದ್ದ ವೇಳೆ ವಿಮಾನ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ.
ಉದುಮ ಬಾರಾ ಮಾಂಙಾಡ್ ತಾಮರಕುಳಿ ನಿವಾಸಿ ಮುಹಮ್ಮದ್ ಯಾಹ್ಯಾ ಯಾಕೂಬ್ (೩೮) ಎಂಬಾತ ಬಂಧಿತ ಆರೋಪಿ. ಕೇರಳ ಬ್ಯಾಂಕ್ನ ಮೇಲ್ಪರಂಬ ಶಾಖೆಯಲ್ಲಿ ನಕಲಿ ಚಿನ್ನ ಅಡವಿರಿಸಿ ೬,೯೦,೫೪೦ ರೂ. ಸಾಲ ಪಡೆದು ವಂಚನೆಗೈದ ಆರೋಪದಂತೆ ಪ್ರಸ್ತುತ ಬ್ಯಾಂಕ್ನ ಮೆನೇಜರ್ ಕಳೆದ ಮಾರ್ಚ್ ೭ರಂದು ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸುವ ವೇಳೆ ಆರೋಪಿ ಗಲ್ಫ್ಗೆ ಹೋಗಿರುವ ಮಾಹಿತಿ ಲಭಿಸಿತ್ತು. ಬಳಿಕ ಆತನ ಪತ್ತೆಗಾಗಿ ಪೊಲೀಸರು ಎಲ್ಲಾ ವಿಮಾನ ನಿಲ್ದಾಣಗಳಿಗೆ ಲುಕೌಟ್ ನೋಟೀಸ್ ಕಳುಹಿಸಿಕೊ ಟ್ಟಿದ್ದರು. ಮೊನ್ನೆ ಆರೋಪಿ ಗಲ್ಫ್ನಿಂದ ವಿಮಾನದಲ್ಲಿ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ವಿಮಾನ ನಿಲ್ದಾಣದ ಅಧಿಕಾರಿಗಳು ಅಲ್ಲಿ ಆತನನ್ನು ತಡೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಬಳಿಕ ಮೇಲ್ಪರಂಬ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಟಿ. ಉತ್ತಮ್ ದಾಸ್ರ ನೇತೃತ್ವದಲ್ಲಿ ಎಸ್ಐ ಎನ್. ಶಶಿಧರನ್ ಪಿಳ್ಳೆ, ಪೊಲೀಸರಾದ ಅಜಿತ್ ಕುಮಾರ್ ಮತ್ತು ಸಕರಿಯಾರನ್ನೊಳ ಗೊಂಡ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ.