ನಗರದ ವ್ಯಾಪಾರ ಸಂಸ್ಥೆಗಳಲ್ಲಿ ಸರಣಿ ಕಳವು ಅಂತಾರಾಜ್ಯ ಕಳವು ಆರೋಪಿ ಸೆರೆ
ಕಾಸರಗೋಡು: ಕಾಸರಗೋಡು ನಗರದ ಎರಡು ವ್ಯಾಪಾರ ಸಂಸ್ಥೆಗಳಲ್ಲಿ ಕಳವು ಹಾಗೂ ಇತರ ಹಲವು ಅಂಗಡಿಗಳಲ್ಲಿ ಕಳವು ಯತ್ನ ನಡೆಸಿದ ಅಂತಾರಾಜ್ಯ ಕಳ್ಳರ ತಂಡದ ಪ್ರಧಾನ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ದೊಡ್ಡಬಳ್ಳಾಪುರ ಮಸ್ಯಾಂದ್ರ ಡಿ ಕ್ರಾಸ್ ಡಿ.ಬಿ ನಗರದ ಪ್ರೇಂ ಕುಮಾರ್ ಅಲಿಯಾಸ್ ಪ್ರೇಮಿ ಅಲಿಯಾಸ್ ಜಾನಿ (24) ಬಂಧಿತ ಆರೋಪಿ. ಕಾಸರಗೋಡು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ. ನಳಿನಾಕ್ಷನ್ ನೇತೃತ್ವದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಕಾಸರಗೋಡು ಮಾತ್ರ ವಲ್ಲದೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾನ ರಾಜ್ಯಗಳಲ್ಲಿ ನಡೆದ ಹಲವು ಕಳವು ಪ್ರಕರಣಗಳಲ್ಲಿ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ಮಾರ್ಚ್ 29ರಂದು ಮುಂಜಾನೆ ಕಾಸರ ಗೋಡು ಕರಂದಕ್ಕಾಡ್‌ನಲ್ಲಿರುವ ಸಿಟಿ ಕೂಲ್ ಇಲೆಕ್ಟ್ರಾನಿಕ್ಸ್ ಅಂಗಡಿ, ಕಾಸರಗೋಡು ರೈಲ್ವೇ ನಿಲ್ದಾಣ ರಸ್ತೆಯ ರೆಡ್ ಚಿಲ್ಲೀಸ್ ಹೈಪರ್ ಮಾರ್ಕೆಟ್‌ನಲ್ಲಿ ಕಳವು ನಡೆದಿತ್ತು. ಈ ಕಳವು ನಡೆಸಿರುವುದು ಪ್ರೇಂ ಕುಮಾರ್ ಆಗಿದ್ದಾನೆಂದು ತಿಳಿದುಬಂದಿದ್ದು, ಇದರಂತೆ ಆತನನ್ನು ಬಂಧಿಸಲಾಗಿದೆ. ಸಿಟಿ ಕೂಲ್ ಇಲೆಕ್ಟ್ರಾನಿಕ್ಸ್ ಅಂಗಡಿಯಿಂದ 40 ಸಾವಿರ ರೂಪಾಯಿ ಮತ್ತು 10 ಸಾವಿರ ರೂಪಾಯಿ ಮೌಲ್ಯದ ಮಿಕ್ಸಿಯನ್ನು ಕಳವುಗೈಯ್ಯಲಾಗಿತ್ತು. ರೆಡ್ ಚಿಲ್ಲೀಸ್ ಹೈಪರ್ ಮಾರ್ಕೆಟ್‌ನಿಂದ ೫೫ ಸಾವಿರ ನಗದು ಒಳಗೊಂಡಂತೆ ಹಲವು ಸಾಮಗ್ರಿಗಳನ್ನು ಕಳವಿಗೀಡಾಗಿತ್ತು. ಇದರ ಹೊರತಾಗಿ ನಗರದ ಅಶ್ವಿನಿ ನಗರದಲ್ಲಿರುವ ಮಕ್ಕಳ ಉಡುಪು, ಮತ್ತು ಆಟಿಕೆ ಮಾರಾಟದಂಗಡಿ ಮತ್ತು ಡ್ರೈ ಫ್ರೂಟ್ಸ್ ಅಂಗಡಿಗಳ ಶೆಟರ್‌ನ ಬಾಗಿಲು ಮುರಿದು ಕಳವು ಯತ್ನವೂ ನಡೆದಿತ್ತು.
ಬಂಧಿತ ಆರೋಪಿಯ ನೇತೃತ್ವದಲ್ಲಿ ಭಾರೀ ದೊಡ್ಡ ಅಂತಾರಾಜ್ಯ ಕಳ್ಳರ ತಂಡವೇ ಕಾರ್ಯವೆಸಗುತ್ತಿದೆಯೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿತ್ತು. ಅದರಿಂದಾಗಿ ಕಾಸರ ಗೋಡಿನಲ್ಲಿ ನಡೆದ ಸರಣಿ ಕಳವು ಪ್ರಕರಣಗಳಲ್ಲಿ ಇತರ ಹಲವರು ಶಾಮೀಲುಗೊಂ ಡಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಅವರ ಪತ್ತೆಗಾಗಿ ವ್ಯಾಪಕ ಶೋಧ ಆರಂಭಿಸಲಾಗಿದೆ. ಬಂಧಿತನನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಈ ವೇಳೆ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.