ಪಾಂಡಿಯಲ್ಲಿ ವ್ಯಾಪಕ ಅಬಕಾರಿ ಕಾರ್ಯಾಚರಣೆ ಕಳ್ಳಭಟ್ಟಿ ಸಾರಾಯಿ, ವಾಶ್ ವಶ
ಅಡೂರು: ಅಡೂರು ಗ್ರಾಮದ ಪಾಂಡಿ ಬೆದಿರಡ್ಕವನ್ನು ಕೇಂದ್ರೀಕರಿಸಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೨೦ ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು ೩೦೦ ಲೀಟರ್ ಹುಳಿರಸ (ವಾಶ್) ಮಾತ್ರವಲ್ಲ ಅಲ್ಲಿ ಉಪೇಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಎರಡು ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಲಾಗಿದೆ.
ಇದಕ್ಕೆ ಸಂಬಧಿಸಿ ಪಾಂಡಿ ಬೆದಿರಡ್ಕದ ರವೀಂದ್ರನ್ ಎಂಬಾತನ ವಿರುದ್ಧ ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಆತ ಆ ವೇಳೆ ತಪ್ಪಿಸಿಕೊಂಡಿರುವುದಾಗಿ ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ. ಪಾಂಡಿ ಬೆದಿರಡ್ಕದಲ್ಲಿ ವ್ಯಾಪಕವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಲಾಗುತ್ತಿದ್ದ ಬಗ್ಗೆ ಕಾಸರಗೋಡು ಅಬಕಾರಿ ಗುಪ್ತಚರ ಬ್ಯೂರೋದ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಜೇಕಬ್ರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ರವೀಂದ್ರನ್ ಎಂ.ಕೆ.ಯವರ ನೇತೃತ್ವದ ಅಬಕಾರಿ ತಂಡ ಈ ಪ್ರದೇಶದಲ್ಲಿ ದಾಳಿ ನಡೆಸಿದೆ. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಶಮ್ನ ಪಿ., ಪಿ. ಜನಾರ್ದನನ್ ಎನ್, ಮೋಹನ್ ಕುಮಾರ್, ಎಲ್. ಜೋನ್ಸನ್ ಪೋಲ್, ಮನೋಜ್ ಪಿ. ಮತ್ತು ಚಾಲಕ ರಾಧಾಕೃಷ್ಣ ಎಂಬವರು ಒಳಗೊಂಡಿದ್ದರು.