ಪ್ರಬಲ ತ್ರಿಕೋನ ಸ್ಪರ್ಧೆಗೆ ಕಾಸರಗೋಡು ಲೋಕಸಭಾ ಕ್ಷೇತ್ರಸಜ್ಜು
ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂರು ರಾಜಕೀಯ ಒಕ್ಕೂಟಗಳ ಉಮೇ ದ್ವಾರರ ಚಿತ್ರಣ ಕೊನೆಗೂ ಪ್ರಕಟಗೊಂಡಿದೆ.
ಇದರಂತೆ ಎನ್‌ಡಿಎ ಉಮೇ ದ್ವಾರರಾಗಿ ಬಿಜೆಪಿಯ ಎಂ.ಎಲ್. ಅಶ್ವಿನಿ, ಯುಡಿಎಫ್ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ರಾಜ್‌ಮೋಹನ್ ಉಣ್ಣಿತ್ತಾನ್ ಮತ್ತು ಎಡರಂಗದ ಉಮೇದ್ವಾರರಾಗಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್ ಮಾಸ್ತರ್ ಸ್ಪರ್ಧಾಕಣದಲ್ಲಿದ್ದು, ಇವರ ನಡುವೆ ಪ್ರಬಲ ತ್ರಿಕೋನ ಸ್ಪರ್ಧೆ ನಡೆದಿದೆ.
ಈ ಕ್ಷೇತ್ರದಲ್ಲಿ ತನ್ನ ಗೆಲುವು ಈ ಬಾರಿಯ ಚುನಾವಣೆಯಲ್ಲಿ ಪುನರಾವರ್ತನೆಗೊಳ್ಳಲಿದೆಯೆಂಬ ತುಂಬು ನಿರೀಕ್ಷೆಯನ್ನು ಕಾಂಗ್ರೆಸ್‌ನ ರಾಜ್‌ಮೋಹನ್ ಉಣ್ಣಿತ್ತಾನ್ ವ್ಯಕ್ತಪಡಿಸಿದ್ದಾರೆ.
ಕಾಸರಗೋಡು ಲೋಕಸಭಾ ಕ್ಷೇತ್ರವು ಹಿಂದಿನಿಂದಲೂ ಎಡರಂಗದ ಭದ್ರಕೋಟೆಯಾಗಿದೆ. ಆದ್ದರಿಂದ ಕಳೆದ ಬಾರಿಯ ಚುನಾವಣೆಗಿಂತ ಭಿನ್ನವಾಗಿ ಈ ಕ್ಷೇತ್ರ ಮತ್ತೆ ಎಡರಂಗದ ಪಾಲಾಗಲಿದೆ. ಆದ್ದರಿಂದ ತನ್ನ ಗೆಲುವು ಸುನಿಶ್ಚಿತವಾಗಿದೆಯೆಂದು ಸಿಪಿಎಂ ಉಮೇದ್ವಾರ ಎಂ.ವಿ. ಬಾಲ ಕೃಷ್ಣನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ದೇಶಾದ್ಯಂತ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಲೆಗಳು ಇನ್ನಷ್ಟು ತಾರಕಕ್ಕೇರತೊಡಗಿದ್ದು, ಅದರಿಂದಾಗಿ ಈ ಕ್ಷೇತ್ರದಲ್ಲಿ ಎನ್‌ಡಿಎ ಹೊಸ ಮುಖವಾಗಿ ಸ್ಪರ್ಧಿಸುತ್ತಿರುವ ಬಿಜೆಪಿಯ ಎಂ.ಎಲ್. ಅಶ್ವಿನಿಯವರು ಗೆಲುವನ್ನು ಪಕ್ಕಾಗೊಳಿಸುವರೆಂದು ಬಿಜೆಪಿ ನೇತಾರರು ಇನ್ನೊಂದೆಡೆ ಹೇಳುತ್ತಿದ್ದಾರೆ.