ಮುಹಿಮ್ಮಾತ್‌ನಲ್ಲಿ ತ್ವಾಹಿರ್ ತಂಙಳ್ ಉರೂಸ್ ನಾಳೆಯಿಂದ
ಕಾಸರಗೋಡು: ಮುಹಿಮ್ಮಾತ್ ಸ್ಥಾಪಕ ಹಾಗೂ ಖ್ಯಾತ ಆಧ್ಯಾತ್ಮಿಕ ವಿದ್ವಾಂಸರಾದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್‌ರ ೧೮ನೇ ಉರೂಸ್ ಮುಬಾರಕ್ ಮತ್ತು ಮುಹಿಮ್ಮಾತ್ ಸನದ್ ದಾನ ಮಹಾ ಸಮ್ಮೇಳನ ಫೆ. ೧೫ರಿಂದ ೧೮ರವರೆಗೆ ಮುಹಿಮ್ಮಾತ್‌ನಲ್ಲಿ ನಡೆಯಲಿದೆ. ನಾಳೆ ಮುಹಿಮ್ಮಾತ್ ಸನದ್ ದಾನ ಸಮಾರಂಭ, ೧೮ರಂದು ರಾತ್ರಿ ಸಮಾರೋಪ ಸಮಾರಂಭ ನಡೆಯಲಿದೆ.
ಉರೂಸ್ ಅಂಗವಾಗಿ -ಝಿಯಾರತ್, ದೌರತುಲ್ ಕುರಾನ್, ಧಾರ್ಮಿಕ ಪ್ರವಚನ, ರಾತೀಬ್, ತಮಿಳು ಸಮ್ಮೇಳನ, ಸ್ವಲಾತ್ ಮಜ್ಲಿಸ್ ಮೊದಲಾದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ನಾಲ್ಕು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸುವರು.
ನಾಳೆ ಬೆಳಿಗ್ಗೆ ೮ ಗಂಟೆಗೆ ಇಚ್ಲಂಗೋಡು ಮಖಾಂ ಝಿಯಾರತ್‌ಗೆ ಸಯ್ಯಿದ್ ಮಹಮ್ಮದ್ ಮದಿ ತಂಙಳ್ ಮೊಗ್ರಾಲ್ ಮತ್ತು ೯ ಅಹ್ದಲ್ ಮಖಾಂ ಝಿಯಾರತ್‌ಗೆ ಸಯ್ಯಿದ್ ಅಬ್ದುಲ್ ಅಝೀಝ್ ಅಲ್ ಹೈದ್ರೂಸಿ ನೇತೃತ್ವ ವಹಿಸಲಿದ್ದಾರೆ. ಸ್ವಾಗತ ಸಂಘ ಅಧ್ಯಕ್ಷ ಅಬ್ದುಸ್ಸಲಾಂ ದಾರಿಮಿ ಕುಬಣೂರು ಧ್ವಜಾರೋಹಣ ಗೈಯ್ಯುವರು. ೧೦ಕ್ಕೆ ಸಯ್ಯಿದ್ ಇಬ್ರಾಹಿಂ ಅಲ್ ಹಾದಿ ಚೂರಿ ಅಧ್ಯಕ್ಷತೆಯಲ್ಲಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸ ಲಿದ್ದಾರೆ. ದೌರತುಲ್ ಖುರ್ ಆನ್ ಮಜ್ಲಿಸ್‌ಗೆ ಸೈಯದ್ ಮುಟ್ಟಂ ಕುಂಞಿಕೋಯ ತಂಙಳ್ ಮತ್ತು ಸ್ವಾಲಿಹ್ ಸಅದಿ ತಳಿಪರಂಬ ನೇತೃತ್ವ ವಹಿಸಲಿದ್ದಾರೆ. ಮುಹಿಮ್ಮಾತ್ ಸಂಸ್ಥೆಯಿಂದ ವಿದ್ಯಾಭ್ಯಾಸ ಪೂರ್ತಿ ಗೊಳಿಸಿದವರಿಗೆ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಸ್ಥಾನವಸ್ತ್ರ ವಿತರಣೆಯನ್ನು ನೆರವೇರಿಸಲಿದ್ದಾರೆ. ಮುಹಮ್ಮದಲಿ ಸಖಾಫಿ ತೃಕ್ಕರಿಪುರ ಅಧ್ಯಕ್ಷತೆಯಲ್ಲಿ ಕುಂಞಮುಹಮ್ಮದ್ ಸಖಾಫಿ ಪರವೂರು ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ ೧.೩೦ಕ್ಕೆ ಜಿಲ್ಲಾ ಮಟ್ಟದ ಹಜ್ ಪ್ರಾಯೋಗಿಕ ತರಬೇತಿ ಸಯ್ಯಿದ್ ಸ್ವಾಲಿಹ್ ತುರಾಬ್ ಸಖಾಫಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿದೆ. ಸುಲೈಮಾನಾ ಕರಿವೆಳ್ಳೂರು ಅಧ್ಯಕ್ಷತೆ ಯಲ್ಲಿ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಸಿ. ಮುಹಮ್ಮದ್ ಫೈಝಿ ಉದ್ಘಾಟಿಸುವರು. ೨ ಗಂಟೆಗೆ ಅಬೂಬಕರ್ ಕಾಮಿಲ್ ಸಖಾಫಿ ಅಧ್ಯಕ್ಷತೆಯಲ್ಲಿ ಅಬ್ದುಲ್ ಅಝೀಝ್ ಮಿಸ್ಬಾಹಿ ಹಿಮಮಿ ಸಂಗಮವನ್ನು ಉದ್ಘಾಟಿಸುವರು. ವೈ. ಎಂ. ಅಬ್ದ್ದುಲ್ ರಹ್ಮಾನ್ ಅಹ್ಸನಿ ವಿಷಯ ಮಂಡಿಸಲಿದ್ದಾರೆ. ಅಪರಾಹ್ನ ೩ ಗಂಟೆಗೆ ಹಮಲತುಲ್ ಖುರಾನ್ ಸಂಗಮ ಹಾಫಿಲ್ ಅಬ್ದುಸ್ಸಲಾಂ ನಿಝಾಮಿ ಯವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಇಸ್ಮಾಯಿಲ್ ಬಾಫಕಿ ಕೊಯಿಲಾಂಡಿ ಉದ್ಘಾಟಿಸುವರು. ಹಾಫಿಲ್ ಕಬೀರ್ ಹಿಮಮಿ ಬೋವಿಕಾನಂ ವಿಷಯ ಮಂಡಿಸುವರು. ಸ್ವಲಾತ್ ಮಜ್‌ಲಿಸ್ ಸಂಜೆ ೬ ಗಂಟೆಗೆ ಆರಂಭಗೊಳ್ಳಲಿದೆ. ೭ಕ್ಕೆ ಸನದ್ ದಾನ ಸಮ್ಮೇಳನಕ್ಕೆ ಸಯ್ಯಿದ್ ಅಲಿ ಬಾಫಕಿ ತಂಙಳ್ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಿದ್ದಾರೆ. ಸಯ್ಯಿದ್ ಮುನೀರುಲ್ ಅಹ್ದಲ್ ತಂಙಲ್ ಸ್ವಾಗತಿಸುವರು. ಬಿ.ಎಸ್. ಅಬ್ದುಲ್ಲ ಕುಂಞಿ ಫೈಝಿಯವರ ಅಧ್ಯಕ್ಷತೆಯಲ್ಲಿ ಸಮಸ್ತ ಅಧ್ಯಕ್ಷ ರಈಸುಲ್ ಉಲಮಾ ಇ ಸುಲೈಮಾನ್ ಉಸ್ತಾದ್ ಉದ್ಘಾಟಿಸುವರು. ಸನದ್ ದಾನ ಹಾಗೂ ಸನದ್ ದಾನ ಪ್ರಭಾಷಣವನ್ನು ಸುಲ್ತಾನುಲ್ ಉಲಮಾ ಕಾಂತಾಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮಾಡಲಿದ್ದಾರೆ. ಎ.ಪಿ. ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್ ಹಾಗೂ ಎ.ಪಿ. ಅಬ್ದುಲ್ ಹಕೀಂ ಅಝ್ಹರಿ ಕಾಂತಪುರಂ ಮುಖ್ಯ ಭಾಷಣ ಮಾಡಲಿದ್ದಾರೆ. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ, ಸುಫ್ಯಾನ್ ಸಖಾಫಿ ಭಾಷಣ ಗೈಯ್ಯುವರು.