ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿ ಪೂರ್ಣ ಹಾನಿ : ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆಗಾಗಿ ಆಗ್ರಹ
ಕಾಸರಗೋಡು: ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳು ತುಂಬಿಕೊಂಡಿರುವುದು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಸೃಷ್ಟಿಯಾಗುತ್ತಿದೆ. ಈ ಹಿಂದೆಯೇ ಸರ್ವಿಸ್ ರಸ್ತೆಗಾಗಿ ಗೋಡೆ ನಿರ್ಮಿಸಿ ಹೊಳೆಗೆ ಹರಿದು ಹೋಗಬೇಕಾದ ಮಳೆ ನೀರನ್ನು ನಿರ್ಮಾಣ ಕಂಪೆನಿ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಈ ಕ್ರಮದಿಂದಾಗಿ ಮೊಗ್ರಾಲ್ ಪುತ್ತೂರಿನ ರಾಷ್ಟ್ರೀಯ ಹೆದ್ದಾರಿ ಪೂರ್ಣವಾಗಿ ಹಾನಿಗೊಂಡಿದೆ. ಕುಂಬಳೆ ಭಾಗದಿಂದ ಕಾಸರಗೋಡು ಭಾಗಕ್ಕೆ ತೆರಳುವ ವಾಹನಗಳಿಗೆ ಕಾಮಗಾರಿ ಪೂರ್ತಿಗೊಳಿಸಿದ ರಸ್ತೆಯನ್ನು ತೆರೆದು ಕೊಡಲಾಗಿದೆ. ಆದರೆ ಕಾಸರಗೋಡಿನಿಂದ ಕುಂಬಳೆ ಭಾಗಕ್ಕೆ ತೆರಳುವ ರಸ್ತೆ ಪೂರ್ಣವಾಗಿ ಹಾನಿಗೀಡಾಗಿರುತ್ತದೆ. ಹೊಸ ರಸ್ತೆ ಎತ್ತರದಲ್ಲಿರುವುದರಿಂದ ಕೆಳ ಭಾಗದಲ್ಲಿರುವ ರಸ್ತೆಯಲ್ಲಿ ನೀರು ಕಟ್ಟಿ ನಿಂತಿರುವುದೇ ರಸ್ತೆ ಹಾನಿಗೀಡಾಗಲು ಕಾರಣವಾಗಿದೆ. ಮಳೆ ಬಿರುಸುಗೊಂಡಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ಪೂರ್ಣವಾಗಿ ಮೊಟಕು ಗೊಳ್ಳಲಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಹಾಗಾದಲ್ಲಿ ವಾಹನ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೊಳಗಾಗಲಿದ್ದಾರೆ. ಆದ್ದರಿಂದ ಎರಡೂ ಭಾಗಗಳ ಕಾಮಗಾರಿ ಪೂರ್ಣಗೊಂಡ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ತಿಳಿಸುತ್ತಿದ್ದಾರೆ.