ಯಕ್ಷಗಾನ ಕಲಾವಿದ ಕಾರಡ್ಕ ರಾಘವ ಬಲ್ಲಾಳ್ರಿಗೆ ಕೇರಳ ಕ್ಷೇತ್ರ ಕಲಾ ಅಕಾಡೆಮಿ ಪ್ರಶಸ್ತಿ
ಕಾಸರಗೋಡು: ಕ್ಷೇತ್ರ ಕಲಾ ಅಕಾಡೆಮಿ ನೀಡುವ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಯಕ್ಷಗಾನ ರಂಗದಲ್ಲಿ ಹಲವು ವರ್ಷ ಸೇವೆಗೈದ ಮುಳ್ಳೇರಿಯ ಬಳಿಯ ಕಾರಡ್ಕ ರಾಘವ ಬಲ್ಲಾಳ್ರಿಗೆ ಯಕ್ಷಗಾನ ವಿಭಾಗದ ಪುರಸ್ಕಾರ ಲಭಿಸಿದೆ. ಮೂರೂವರೆ ದಶಕಗಳ ಕಾಲ ಯಕ್ಷಗಾನದಲ್ಲಿ ಚೆಂಡೆ-ಮದ್ದಳೆ ವಾದಕರಾಗಿದ್ದ ಇವರು ಭಾಗವತಿಕೆ ಯನ್ನು ಕರಗತಮಾಡಿಕೊಂಡಿದ್ದಾರೆ. ಕರ್ನಾಟಕ, ಕೇರಳದ ನೂರಾರು ವೇದಿಕೆಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದು, ಹಲವಾರು ಕಡೆ ಹಿಮ್ಮೇಳ ತರಬೇತಿ ನೀಡುತ್ತಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು ವಿವಿಧ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿದ್ದು, ಇವರಿಗೆ ೨೦೨೧ರಲ್ಲಿ ದಕ್ಷಿಣಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ತನ್ನ ೧೬ನೇ ವಯಸ್ಸಿನಲ್ಲಿ ಯಕ್ಷಗಾನ ಮೇಳಕ್ಕೆ ಸೇರಿ ಮದ್ದಳೆ ವಾದಕರಾಗಿದ್ದ ಇವರು ಯಕ್ಷಗಾನ ರಂಗದಲ್ಲಿ ತನ್ನದೇ ಛಾಪು ಮೂಡಿಸಿ ಯಕ್ಷಗಾನ ಪ್ರಿಯರ ಗಮನ ಸೆಳೆದಿದ್ದಾರೆ. ಈಗಲೂ ಹಲವು ಕಡೆಗಳಲ್ಲಿ ಹಿಮ್ಮೇಳ ತರಬೇತಿ ನೀಡುತ್ತಿದ್ದಾರೆ. ಯಕ್ಷಗಾನದ ಅಭಿವೃದ್ಧಿಗೆ ಬೇಕಾಗಿ ಕಾರಡ್ಕ ಫೌಂಡೇಶನ್ ಟ್ರಸ್ಟ್ ರೂಪಿಸಿದ್ದು, ಪ್ರತಿ ವರ್ಷ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಕ್ಷೇತ್ರ ಕಲಾ ಅಕಾಡೆಮಿಯ ಕ್ಷೇತ್ರ ಕಲಾಶ್ರೀ ಪುರಸ್ಕಾರಕ್ಕೆ ಈ ಬಾರಿ ಗಾಯಕಿ ಚಿತ್ರಾ ಅರ್ಹರಾಗಿದ್ದಾರೆ. ಕ್ಷೇತ್ರಕಲಾ ಫೆಲೋಶಿಪ್ ಡಾ. ರಾಜಶ್ರೀ ವಾರ್ಯರ್ ಹಾಗೂ ಡಾ. ಆರ್.ಎಲ್.ವಿ. ರಾಮಕೃಷ್ಣನ್ರಿಗೆ ಲಭಿಸಿದೆ. ಅಕ್ಟೋಬರ್ ೬ರಂದು ಪಳಯಂಗಾಡಿಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಸಚಿವ ವಿ.ಎನ್. ವಾಸವನ್ ಪುರಸ್ಕಾರ ಪ್ರದಾನಗೈ ಯ್ಯುವರು. ಇದರ ಜೊತೆಯಲ್ಲೇ ವಿವಿಧ ವಲಯಗಳಲ್ಲಿ ಸೇವೆಗೈದು ಪ್ರಸಿದ್ಧರಾದ ಹಲವರಿಗೂ ಪುರಸ್ಕಾರ ಪ್ರದಾನ ನಡೆಯಲಿದೆ.