ರಸ್ತೆಯ ಹೊಂಡಕ್ಕೆ ಬಿದ್ದು ನಿಯಂತ್ರಣ ತಪ್ಪಿದ ಕಾರು ಶೋರೂಂಗೆ ನುಗ್ಗಿ 4 ಕಾರುಗಳಿಗೆ ಹಾನಿ
ಕಾಸರಗೋಡು: ಉದುಮ, ಪಳ್ಳದಲ್ಲಿ ನಿಯಂತ್ರಣ ತಪ್ಪಿದ ಕಾರು ಕಾರುಶೋರೂಂಗೆ ನುಗ್ಗಿ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಕರ್ನಾಟಕ ನಿವಾಸಿಗಳಾದ ಇಬ್ಬರು ಗಾಯಗೊಂಡಿದ್ದಾರೆ. ಶೋರೂಂನಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಕಾರುಗಳು ಸಂಪೂರ್ಣ ಹಾನಿಗೊಂಡಿದೆ. ಇಂದು ಮುಂಜಾನೆ 5 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ. ಪಾಕ್ಯಾರ ನಿವಾಸಿ ಪ್ರವೀಣ್‌ರ ಮಾಲಕತ್ವದಲ್ಲಿ ಉದುಮ ಪಳ್ಳದಲ್ಲಿ ಕಾರ್ಯಾಚರಿಸುವ ಯೂಸ್ಡ್‌ಕಾರ್ ಶೋರೂಂಗೆ ಕಾರು ನುಗ್ಗಿದೆ. ಉದುಮ ಪಂಚಾಯತ್ ಕಚೇರಿ ಸಮೀಪ ಹಾನಿಗೊಂಡಿರುವ ರಸ್ತೆಯ ಹೊಂಡಕ್ಕೆ ಬಿದ್ದು ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಮುಂಜಾನೆಯಾದ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ.