ರಾಗಂ ಜಂಕ್ಷನ್‌ನಲ್ಲಿ ಅನಿರ್ಧಿಷ್ಟ ಮುಷ್ಕರ ಎಂಟನೇ ದಿನಕ್ಕೆ: ಸ್ಥಳೀಯ ಜನಪ್ರತಿನಿಧಿಗಳ ಬೆಂಬಲ
ಮಂಜೇಶ್ವರ: ಇಲ್ಲಿನ ರಾಗಂ ಜಂಕ್ಷನ್‌ನಲ್ಲಿ ಹೆದ್ದಾರಿ ದಾಟಲು ಸುರಕ್ಷಿತ ವ್ಯವಸ್ಥೆ ಕಲ್ಪಿಸದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಭಿತ್ತಿಪತ್ರ ಪ್ರದರ್ಶಿಸಿ ಸ್ಥಳೀಯರು ಮುಷ್ಕರ ನಡೆಸುತ್ತಿದ್ದು, ಇಂದು ೮ನೇ ದಿನಕ್ಕೆ ಕಾಲಿರಿಸಿದೆ. ಹೆದ್ದಾರಿಯನ್ನು ಅಡ್ಡದಾಟಲು ಪರ‍್ಯಾಯ ವ್ಯವಸ್ಥೆ ಇಲ್ಲದ ಕಾರಣ ಸ್ಥಳೀಯರ ಸಮಸ್ಯೆ ತೀವ್ರಗೊಂಡಿದೆ. ಏಳನೇ ದಿನವಾದ ನಿನ್ನೆ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿ ಇಲ್ಲಿ ರಸ್ತೆ ದಾಟಲು ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.
ಸರಕಾರಿ ಆಸ್ಪತ್ರೆ, ಕಾಲೇಜು, ಸ್ಥಳೀಯಾಡಳಿತ ಸಂಸ್ಥೆ, ರೈಲ್ವೇ ನಿಲ್ದಾಣ ಸೇರಿದಂತೆ ಹಲವು ಪ್ರಧಾನ ಕೇಂದ್ರಗಳು ಇಲ್ಲಿದ್ದು ಹೆದ್ದಾರಿ ಷಷ್ಪಥರಸ್ತೆ ಕಾಮಗಾರಿ ಅಂತಿಮ ಹಂತ ತಲುಪಿದರೂ ಜನರಿಗೆ ಹೆದ್ದಾರಿ ದಾಟಲು ಕಾಲುದಾರಿ ನಿರ್ಮಿಸದಿರುವುದು ಇಲ್ಲಿಯವರಲ್ಲಿ ರೋಷ ತಂದಿದೆ.
ನಿನ್ನೆ ನಡೆದ ಮುಷ್ಕರವನ್ನು ಶಾಸಕ ಎಕೆಎಂ. ಅಶ್ರಫ್ ಉದ್ಘಾಟಿಸಿದರು. ಅವರು ಮಾತನಾಡಿ ತಿರುವನಂತಪುರದಲ್ಲಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿಮಾಡಿ ರಸ್ತೆ ಅಡ್ಡದಾಟಲು ಸುರಕ್ಷಿತ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸುವುದಾಗಿ ಭರವಸೆ ನೀಡಿದರು. ಈ ಬೇಡಿಕೆ ಸ್ಪಂದನೆ ಲಭಿಸದಿದ್ದರೆ ಸ್ಥಳೀಯರನ್ನು ಸೇರಿಸಿ ಇನ್ನಷ್ಟು ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಅವರು ನುಡಿದರು. ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ ಅಧ್ಯಕ್ಷತೆ ವಹಿಸಿದರು. ಜಿ.ಪಂ. ಸದಸ್ಯ ಗೋಲ್ಡನ್ ರಹ್ಮಾನ್ ಸೇರಿದಂತೆ ಹಲವರು ಭಾಗವಹಿಸಿದರು.
ಟ್ರಾಕ್ ಪ್ಯಾಂಟ್‌ನ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕ ಮೃತ್ಯು
ಕಾಸರಗೋಡು: ಆಟವಾಡುತ್ತಿದ್ದ ವೇಳೆ ಅಚಾತುರ್ಯದಿಂದ ಟ್ರಾಕ್ ಪ್ಯಾಂಟ್‌ನ ಹಗ್ಗ ಕುತ್ತಿಗೆಗೆ ಸಿಲುಕಿ ಹತ್ತು ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ. ಕಣ್ಣೂರು ಇರಿಣಾವ್ ಪುತ್ತಿರಿಪುರಂ ನಿವಾಸಿ ಕೆ.ವಿ. ಜಲೀಲ್- ಆಯಿಷಾ ದಂಪತಿ ಏಕಪುತ್ರ, ಕೆ.ವಿ. ಬಿಲಾಲ್ (೧೦) ಮೃತಪಟ್ಟ ಬಾಲಕ. ಘಟನೆ ನಡೆದ ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಇರಿಣವ್ ಹಿಂದೂ ಎಲ್.ಪಿ. ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದನು.