ಕರಿ ಆಯಿಲ್ ಸಂಸ್ಕರಣಾ ಘಟಕದ ಕಾರ್ಮಿಕ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕರಿ ಆಯಿಲ್ ಶುದ್ಧೀಕರಣ ಘಟಕದ ಸಿಬ್ಬಂದಿ ಅತ್ಯಂತ ನಿಗೂಢವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮಡಿಕೈ ಪಂಚಾ ಯತ್ ಎರಿಕುಳಂ ನಿಡುಂತುಡುಪ್ಪು ಪಾರದಲ್ಲಿರುವ ಕರಿ ಆಯಿಲ್ ಸಂಸ್ಕರಣಾ ಘಟಕದ ಕಾರ್ಮಿಕ   ಮಡಿಕೈ ಸಮೀಪದ ಕಕ್ಕಾಟ್ ಒಯತ್ತ್ ಕಾಯಿಲೆವಳಪ್ಪಿಲ್‌ನ  ಬಾಲನ್ (೬೫) ಎಂಬವರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ವ್ಯಕ್ತಿ.

ಕರಿ ಆಯಿಲ್ ಸಂಸ್ಕರಣಾ ಘಟಕದ ಬಳಿಯಲ್ಲೇ ಇವರು ಸಾವನ್ನಪ್ಪಿದ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದ್ದಾರೆ. ಬಾಯಿಯಲ್ಲಿ  ರಕ್ತವಾಂತಿಯಾದ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಮಾತ್ರವಲ್ಲ ಕಾಲಿನ ಪಾದದಲ್ಲೂ ರಕ್ತದ ಕಲೆಗಳು ಪತ್ತೆಯಾಗಿದೆ.  ಮಾತ್ರವಲ್ಲ ಅವರು ಧರಿಸಿದ ಧೋತಿಯನ್ನು ಕಳಚಿ   ಮೃತದೇಹವನ್ನು ಮುಚ್ಚಿದ ಸ್ಥಿತಿಯಲ್ಲಿತ್ತು. ಮೃತದೇಹದ ಪಕ್ಕ ಎರಡು ಕಾಲಿನ ಗುರುತು ಪತ್ತೆಯಾಗಿದ್ದು, ಅದರಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಈ ಸ್ಥಳದಲ್ಲಿ ಬಾಲನ್ ಮತ್ತು ಇತರ ಮೂವರು ಸೇರಿ ಮದ್ಯಪಾನಗೈದ  ಮಾಹಿತಿ ಪೊಲೀಸರಿಗೆ ಲಭಿಸಿದೆ . ಮದ್ಯಸೇವನೆ ಬಳಿಕ ಇಬ್ಬರು ಮೊದಲೇ ಅಲ್ಲಿಂದ ಹೋಗಿದ್ದರು. ಕರ್ನಾಟಕದ ವಲಸೆ ಕಾರ್ಮಿಕನಾದ ಇನ್ನೋರ್ವ ಆಬಳಿಕ ಬಾಲನ್ ಜತೆಗಿದ್ದನೆಂದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಆದ್ದರಿಂದ ಈ ವಲಸೆ ಕಾರ್ಮಿಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.

ಬಾಲನ್‌ರ ಮೃತದೇಹವನ್ನು ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದ ಬಳಿಕವಷ್ಟೇ ಬಾಲನ್‌ರ ಸಾವಿನ ಕಾರಣ ತಿಳಿದುಕೊಳ್ಳಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ. ನೀಲೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಕೆ. ಪ್ರೇಮಸದನ್, ಎಸ್‌ಐ ಐ.ಪಿ. ವಿಶಾಖ್ ನೇತೃತ್ವದ ಪೊಲೀಸರ ತಂಡ ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ.

ಮೃತ ಬಾಲನ್ ಪ್ರಸ್ತುತ ಕರಿ ಆಯಿಲ್ ಸಂಸ್ಕರಣಾ ಘಟಕದ ಸಹಾಯಕ ಆಪರೇಟರ್ ಆಗಿ ದುಡಿಯುತ್ತಿದರು. ಕಳೆದ ಎರಡು ವಾರದಿಂದ ಈ ಘಟಕದಲ್ಲಿ ಕಾರ್ಯವೆಸಗಿರಲಿಲ್ಲ. ಪೊಲೀಸ್ ಇಲಾಖೆಯ ಫೋರೆನ್ಸಿಕ್ ತಜ್ಞರೂ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

ಮೃತ ಬಾಲನ್  ಪತ್ನಿ ರಾಧಾ ಪಳ್ಳಿಕ್ಕೆರೆ, ಮಕ್ಕಳಾದ ರಾಹುಲ್, ರಾಖಿ, ಅಳಿಯ ಪ್ರಮೋದ್, ಸೊಸೆ ಸ್ನೇಹ, ಸಹೋದರಿಯರಾದ ನಾರಾಯಣಿ, ಶಾರದ, ಓಮನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page