ರಾಜ್ಯ ಶಾಲಾ ಕಲೋತ್ಸವದಲ್ಲಿ ಜಿಲ್ಲೆಯ ಸಾಧನೆ ಸಂಸ್ಕೃತೋತ್ಸವ, ಅರಬಿಕ್, ಯಕ್ಷಗಾನದಲ್ಲಿ ಉತ್ತಮ ಪ್ರದರ್ಶನ
ಕಾಸರಗೋಡು: ತಿರುವನಂತಪುರ ದಲ್ಲಿ ನಡೆದ ರಾಜ್ಯ ಕಲೋತ್ಸವದಲ್ಲಿ ಕಾಸರಗೋಡು ಜಿಲ್ಲೆ ಸಾಧನೆ ಮೆರೆದಿದೆ. ಒಟ್ಟು 913 ಅಂಕವನ್ನು ರಾಜ್ಯ ಮಟ್ಟದ ಶಾಲಾ ಕಲೋತ್ಸವ ದಲ್ಲಿ ಜಿಲ್ಲೆ ಪಡೆದಿದೆ.
ಸಂಸ್ಕೃತೋತ್ಸವದಲ್ಲಿ ಪ್ರಥಮ ಸ್ಥಾನ, ಅರೆಬಿಕ್ ಕಲೋತ್ಸವದಲ್ಲಿ ದ್ವಿತೀಯ ಸ್ಥಾನ, ಯಕ್ಷಗಾನದಲ್ಲಿ ಪ್ರಥಮ ಸ್ಥಾನ ಜಿಲ್ಲೆಗೆ ಲಭಿಸಿದೆ. ಹೈಸ್ಕೂಲ್ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಜಿಲ್ಲೆಗೆ ಹೆಮ್ಮೆ ತಂದಿದೆ.
ಅಗಲ್ಪಾಡಿ ಹೈಯರ್ ಸೆಕೆಂಡರಿ ಶಾಲೆ, ದುರ್ಗಾ ಹೈಯರ್ ಸೆಕೆಂಡರಿ, ನೀಲೇಶ್ವರ ರಾಜಾಸ್, ಪಿಲಿಕ್ಕೋಡ್ ಹೈಯರ್ ಸೆಕೆಂಡರಿ ಶಾಲೆಗಳ ಸಂಸ್ಕೃತೋತ್ಸವದಲ್ಲಿ ಉತ್ತಮ ಪ್ರದ ರ್ಶನ ನೀಡಿವೆ. ನಾಯಮ್ಮಾರ್ ಮೂಲೆ ಟಿಐಎಚ್‌ಎಸ್‌ಎಸ್, ಚೆಮ್ನಾಡು ಹೈಯರ್ ಸೆಕೆಂಡರಿ, ತಚ್ಚಂ ಗಾಡ್ ಶಾಲೆ ಅರೆಬಿಕ್ ಕಲೋತ್ಸವದಲ್ಲಿ ಉತ್ತಮ ಪ್ರದರ್ಶನ ನೀಡಿವೆ.
ಯಕ್ಷಗಾನ ಸ್ಪರ್ಧೆಯಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದಿದೆ. ಕಳೆದ ವರ್ಷ ಕೂಡಾ ಇದೇ ಶಾಲೆಗೆ ಯಕ್ಷಗಾನದಲ್ಲಿ ಪ್ರಥಮ ಸ್ಥಾನ ಲಭಿಸಿತ್ತು. ಹೈಸ್ಕೂಲ್ ವಿಭಾಗ ನಾಟಕ ಸ್ಪರ್ಧೆ ಯಲ್ಲಿ ಸತತ ಮೂರನೇ ಬಾರಿಯೂ ಇರಿಯಣ್ಣಿ ಶಾಲೆ ಎ ಗ್ರೇಡ್ ಪಡೆದಿದೆ. ಇರಿಯಣ್ಣಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಇರಿಟ್ಟಿ ನಿವಾಸಿ ಅನೂಪ್‌ರಾಜ್ ರಚಿಸಿ, ನಿರ್ದೇಶಿಸಿದ ‘ಓರ್ಮಯಿಲ್ ಕಾಡುಳ್ಳ ಮೃಗಂ’ ಎಂಬ ನಾಟಕಕ್ಕೆ ಎ ಗ್ರೇಡ್ ಲಭಿಸಿದೆ.
ಚಿನ್ನದ ಕಿರೀಟ ತೃಶೂರಿಗೆ; ಪಾಲಕ್ಕಾಡ್‌ಗೆ ದ್ವಿತೀಯ ಸ್ಥಾನ
ತಿರುವನಂತಪುರ: ತಿರುವನಂತಪುರದಲ್ಲಿ ಕಳೆದ ಐದು ದಿನಗಳಲ್ಲಾಗಿ ನಡೆದ ರಾಜ್ಯ ಶಾಲಾ ಕಲೋತ್ಸವದಲ್ಲಿ ಕೊನೆಯ ಕ್ಷಣದ ತನಕ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ತೃಶೂರು ಜಿಲ್ಲೆ ಸರ್ವಾಂಗೀಣ ಪ್ರದರ್ಶನ ನೀಡಿ ಚಿನ್ನದ ಟ್ರೋಫಿ ಗೆದ್ದುಕೊಂಡಿದೆ.
ತೃಶೂರು ಜಿಲ್ಲೆ 1008 ಅಂಕ ಗಳಿಸಿ ಅಗ್ರ ಸ್ಥಾನ ಗಿಟ್ಟಿಸಿಕೊಂಡಿದೆ. ಕೇವಲ ಒಂದು ಅಂಕದ ವ್ಯತ್ಯಾಸದಿಂದ 1007 ಅಂಕ ಪಡೆದ ಪಾಲಕ್ಕಾಡ್ ಜಿಲ್ಲೆ ಎರಡನೇ ಸ್ಥಾನದಲ್ಲಿ ತೃಪ್ತಿ ಪಡಬೇಕಾಗಿ ಬಂದಿದೆ. ಇನ್ನು 1003 ಅಂಕ ಪಡೆದ ಕಣ್ಣೂರು ಜಿಲ್ಲೆಗೆ ಮೂರನೇ ಸ್ಥಾನ ಲಭಿಸಿದೆ. ತೃಶೂರು ಜಿಲ್ಲೆ ಚಾಂಪಿಯನ್ಶಿಪ್ ಆಗುತ್ತಿರುವುದು ಇದು ಐದನೇ ಬಾರಿಯಾಗಿದೆ. 1986, 94,96 ಮತ್ತು 1999ರಲ್ಲಿ ತೃಶೂರು ಚಾಂಪಿಯನ್ ಆಗಿತ್ತು.
ನಿನ್ನೆ ಸಂಜೆ ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು. ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ ಅಧ್ಯಕ್ಷ ಎ.ಎನ್. ಶಂಶೀರ್, ನಟರಾದ ಟೋಮಿನೋ ಥೋಮಸ್, ಆಸಿಫ್ ಅಲಿ, ಸಚಿವರುಗಳಾದ ಕೆ.ಎನ್. ಬಾಲಗೋಪಾಲನ್, ಕೆ. ರಾಜನ್, ಜಿ.ಆರ್. ಅನಿಲ್, ಕಡನ್ನಪ್ಪಳ್ಳಿ ರಾಮಚಂದ್ರನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು. ಶಾಲಾ ಕಲೋತ್ಸವದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರೀ ಶಾಲೆ ಹೈಸ್ಕೂಲ್ ವಿಭಾಗದಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಅರಬಿಕ್ ಕಲೋತ್ಸವದಲ್ಲಿ ಕಾಸರಗೋಡು ಜಿಲ್ಲೆಗೆ ದ್ವಿತೀಯ ಸ್ಥಾನ ಲಭಿಸಿದೆ.