ರೋಯಲ್ ಟ್ರಾವಂಕೂರ್ ಠೇವಣಿ ವಂಚನೆ: ಕುಂಬಳೆಯಲ್ಲಿ ಪೊಲೀಸ್ ತನಿಖೆ ಆರಂಭ
ಕುಂಬಳೆ: ಬಡಜನತೆಗೆ ಭರವಸೆಯೊಡ್ಡಿ ಕೋಟ್ಯಂ ತರ ರೂಪಾಯಿ ಠೇವಣಿ ಸಂಗ್ರಹಿಸಿ ವಂಚಿಸಲಾಯಿ ತೆಂಬ ದೂರುಗಳು ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನಿಖೆಯಂಗವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ರೋಯಲ್ ಟ್ರಾವಂಕೂರ್ ಕಂಪೆನಿಯ ಕುಂಬಳೆ ಶಾಖೆಯ ನೌಕರೆಯರಾದ ಐವರು ಯುವತಿಯರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಕಂಪೆನಿಗೆ ಠೇವಣಿ ಸಂಗ್ರಹಿಸಿಕೊಟ್ಟ ತಮಗೂ ಕಂಪೆನಿ ವೇತನ ನೀಡದೆ ವಂಚಿಸಿದೆಯೆಂದು ದೂರುಗಾರರು ಪೊಲೀಸರಲ್ಲಿ ತಿಳಿಸಿದ್ದಾರೆ. ಠೇವಣಿಗಾರರಿಂದ ಲಭಿಸಿದ ಹಣವನ್ನು ಎಣಿಕೆ ಮಾಡಿ ಯಥಾ ಸಮಯ ಕಂಪೆನಿಯ ಮಾಲಕರಿಗೆ ಹಸ್ತಾಂತರಿಸಿರುವುದಾಗಿ ಅವರು ಪೊಲೀಸರಲ್ಲಿ ತಿಳಿಸಿದ್ದಾರೆ. ಆದರೆ ಯಾವ ಭರವಸೆ, ವ್ಯವಸ್ಥೆಯ ಆಧಾರದಲ್ಲಿ ಪುಸಲಾಯಿಸಿ ಬಡವರಿಂದ ಹಣ ಸಂಗ್ರಹಿಸಲಾಗಿದೆಯೆಂಬ ಪ್ರಶ್ನೆಗೆ ದೂರುಗಾರರು ಉತ್ತರಿಸಿಲ್ಲವೆನ್ನಲಾಗಿದೆ.
ಬದಿಯಡ್ಕ, ಕುಂಬಳೆ, ಉಪ್ಪಳ, ಪೆರ್ಲ, ಕಾಸರಗೋಡು, ಉದುಮ, ತೊಕ್ಕೋಟ್, ಮಂಗಳೂರು ಎಂಬೆಡೆಗಳಲ್ಲಿ ಹಾಗೂ ರಾಜ್ಯದ ಇತರ ವಿವಿಧೆಡೆಗಳಲ್ಲಿ ಕಂಪೆನಿಗೆ ಠೇವಣಿ ಸಂಗ್ರಹ ಕೇಂದ್ರಗಳಿತ್ತೆಂದು ನೌಕರರು ತಿಳಿಸಿದ್ದಾರೆ. ಅವುಗಳಲ್ಲಿ ಬಹುತೇಕವೂ ಮುಚ್ಚುಗಡೆಗೊಳಿಸಿವೆಯೆಂದೂ ತಿಳಿಸಲಾಗಿದೆ.
ನೌಕರರಿಂದ ಹೇಳಿಕೆ ಸಂಗ್ರಹಿಸುವ ವಿಷಯ ತಿಳಿದು ತಲುಪಿದ ಇಪ್ಪತ್ತರಷ್ಟು ಮಹಿಳಾ ಠೇವಣಿದಾರರೊಂದಿಗೆ ದೂರು ಬರೆದು ನೀಡುವಂತೆಯೂ, ಕಂಪೆನಿ ಮಾಲಕರು ನಾಳೆ ಠಾಣೆಯಲ್ಲಿ ಹಾಜರಾಗುವುದಾಗಿ ತಿಳಿಸಿರುವುದಾಗಿಯೂ ಪೊಲೀಸರು ಹೇಳಿದ್ದಾರೆ.