ವಾಟ್ಸಪ್ ಗ್ರೂಪ್‌ನಲ್ಲಿ ಮತೀಯ ಸಾಮರಸ್ಯಕ್ಕೆ ಭಂಗ ಸೃಷ್ಟಿಸುವ ರೀತಿಯಲ್ಲಿ ಸುಳ್ಳು ಪ್ರಚಾರ: ಆರೋಪಿ ಕಸ್ಟಡಿಗೆ
ಕುಂಬಳೆ: ಮತೀಯ ಸಾಮರಸ್ಯಕ್ಕೆ ಭಂಗವುಂಟುಮಾಡುವ ರೀತಿಯಲ್ಲಿ ವಾಟ್ಸಪ್ ಗ್ರೂಪ್‌ನಲ್ಲಿ ಸುಳ್ಳು ಪ್ರಚಾರ ಗೈದ ಪ್ರಕರಣದ ಆರೋಪಿಯನ್ನು ಕುಂಬಳೆ ಪೊಲೀಸರು ಕರಿಪ್ಪೂರ್ ವಿಮಾನ ನಿಲ್ದಾಣದಿಂದ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಚೌಕಿ ನಿವಾಸಿ ರಫೀಕ್‌ರಸು ಯಾನೆ ಕುನ್ನಿಲ್ ಮೊಹಮ್ಮದ್ ರಫೀಕ್ ಎಂಬಾತ ಕಸ್ಟಡಿಯಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2023 ಜುಲೈ 28ರಂದು ಆರೋಪಿ ರಫೀಕ್ ರಸು ಗಲ್ಫ್‌ನಲ್ಲಿದ್ದುಕೊಂಡು ಕುಂಬಳೆಯ ವಾಟ್ಸಪ್ ಗ್ರೂಪ್‌ವೊಂದರಲ್ಲಿ ಕೋಮುಸಾಮರಸ್ಯಕ್ಕೆ ಭಂಗ ಸೃಷ್ಟಿಸುವ ರೀತಿಯಲ್ಲಿ ಸುಳ್ಳು ವರದಿಯನ್ನು ಹಂಚಿದ್ದನೆನ್ನಲಾಗಿದೆ. ಇದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸರು ಸ್ವಯಂ ಕೇಸು ದಾಖಲಿಸಿಕೊಂಡಿದ್ದರು. ಬಳಿಕ ನಡೆಸಿದ ತನಿಖೆಯಲ್ಲಿ ಆರೋಪಿ ಗಲ್ಫ್‌ನಲ್ಲಿರುವುದಾಗಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನ ಪತ್ತೆಗಾಗಿ ಪೊಲೀಸರು ಲುಕೌಟ್ ನೋಟೀಸ್ ಜ್ಯಾರಿಗೊಳಿಸಿದ್ದರು. ಈ ಮಧ್ಯೆ ನಿನ್ನೆ ರಾತ್ರಿ ಗಲ್ಫ್‌ನಿಂದ ಮರಳಿದ ರಫೀಕ್‌ರಸು ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಅಧಿಕಾರಿಗಳು ಆತನನ್ನು ತಡೆದು ನಿಲ್ಲಿಸಿ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಂತೆ ಕರಿಪ್ಪೂರ್‌ಗೆ ತೆರಳಿದ ಕುಂಬಳೆ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ತೆಗೆದು ಕುಂಬಳೆಗೆ ತಲುಪಿಸಿದ್ದಾರೆ.