ವಾನರಗುಂಪು ತೆಂಗಿನಕಾಯಿ ಕೊಯ್ದು ಎಸೆದು ಮಹಿಳೆಯ ಕೈ ಮುರಿತ
ಬೋವಿಕ್ಕಾನ: ಮನೆ ಅಂಗಳದ ತೆಂಗಿನ ಮರಕ್ಕೆ ವಾನರ ಗುಂಪು ಬಂದು ತೆಂಗಿನ ಕಾಯಿ ಕೊಯ್ದು ಎಸೆದು ಮಹಿಳೆಯ ಕೈ ಮುರಿತ ಕ್ಕೊಳಗಾದ ಘಟನೆ ನಡೆದಿದೆ. ಮುಳಿಯಾರು ಬಾವಿಕ್ಕೆರೆ ಕೊಳತ್ತಿಂಗಾಲ್ನ ಕೃಷ್ಣನ್ ನಾಯರ್ರ ಪತ್ನಿ ಪಿ. ಸಾವಿತ್ರಿ ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಳೆದ ಶುಕ್ರವಾರ ಬೆಳಿಗ್ಗೆ ಸಾವಿತ್ರಿ ಮನೆಯಲ್ಲಿ ಪಾತ್ರೆ ತೊಳೆಯಲೆಂದು ಹೊರ ಬಂದಾಗ ಮನೆ ಪಕ್ಕದ ತೆಂಗಿನ ಮರದಲ್ಲಿ ಕುಳಿತಿದ್ದ ವಾನರರ ಗುಂಪೊಂದು ತೆಂಗಿನಕಾಯಿ ಕೊಯ್ದು ಎಸೆದಿದೆ.
ಆ ತೆಂಗಿನ ಕಾಯಿ ಸಾವಿತ್ರಿಯವರ ಕೈಗೆ ಬಿದ್ದು ಎಲುಬು ಮುರಿತಕ್ಕೊಳಗಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ವಾನರರ ಉಪಟಳ ಈ ಪ್ರದೇಶದಲ್ಲಿ ಇತ್ತೀಚೆಗಿನಿಂದ ತೀವ್ರಗೊಂಡಿದೆ ಎಂದೂ, ಅವುಗಳು ತೆಂಗಿನ ಮರವೇರಿ ತೆಂಗಿನಕಾಯಿಗಳನ್ನು ಹಾಳು ಮಾಡುತ್ತಿರುವುದಾಗಿ ಈ ಪ್ರದೇಶದ ಜನರು ಹೇಳುತ್ತಿದ್ದಾರೆ.