ವಾಹನ ಅಪಘಾತದಲ್ಲಿ ಕಲೆಕ್ಟರೇಟ್ ನೌಕರ ದಾರುಣ ಮೃತ್ಯು

ಕಾಸರಗೋಡು: ವಾಹನ ಅಪಘಾತದಲ್ಲಿ ಕಾಸರಗೋಡು ಕಲೆಕ್ಟರೇಟ್‌ನ ನೌಕರರೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಚೀಮೇನಿ ಅತ್ತುಟ್ಟಿ ಎಂಬಲ್ಲಿ ವಾಸಿಸುವ ಭೀಮನಡಿ ವಾಳಪ್ಪಳ್ಳಿ ನಿವಾಸಿ ಟಿ. ಅಶ್ರಫ್ (46) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ 7.30ರ ವೇಳೆ ಚೆರುವತ್ತೂರು- ಚೀಮೇನಿ ರಸ್ತೆಯ ಆನಿಕ್ಕಾಡಿ ಎಂಬಲ್ಲಿ ಅಪಘಾತ ಸಂಭವಿಸಿದೆ. ಅಶ್ರಫ್ ಸಂಚರಿಸುತ್ತಿದ್ದ ಸ್ಕೂಟರ್‌ಗೆ ಬುಲ್ಲೆಟ್ ಬೈಕ್ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ  ಅಶ್ರಫ್‌ರನ್ನು ಚೆರುವತ್ತೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಗಂಭೀರ ಗಾಯಗೊಂಡ ಬುಲ್ಲೆಟ್ ಸವಾರ ನಿಡುಂಬ ನಿವಾಸಿ ಅಖಿಲ್ (22) ಎಂಬವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಅಶ್ರಫ್ ಕಲೆಕ್ಟರೇಟ್‌ನ ಎಸ್‌ಸಿ, ಎಸ್‌ಟಿ ಸೆಕ್ಷನ್ ನೌಕರನಾಗಿದ್ದರು. ಹಿಮಾಂ ಅತ್ತುಟ್ಟಿ ಚಾರಿಟಿ  ಸಂಘಟನೆಯ ಕಾರ್ಯದರ್ಶಿ, ಮುಸ್ಲಿಂ ಲೀಗ್‌ನ ಪೋಷಕ  ಸಂಘಟನೆಯಾದ ಎಸ್‌ಇಯುನ ಜಿಲ್ಲಾ ಕಾರ್ಯದರ್ಶಿ, ಅತ್ತುಟ್ಟಿ ಜಮಾಯತ್ ಕಮಿಟಿ ಕಾರ್ಯದರ್ಶಿಯೂ ಆಗಿದ್ದರು.

ದಿ| ನಾಲುಪುರಪ್ಪಟ್ಟಿಲ್ ಇಬ್ರಾ ಹಿಂ- ನಫೀಸ ದಂಪತಿಯ ಪುತ್ರನಾದ ಮೃತರು ಪತ್ನಿ ಎ.ಪಿ.ಕೆ. ರಸಿಯ, ಮಕ್ಕಳಾದ ಅರ್ಫಾನ, ಅಶ್ಫಾಕ್, ರಫೀತ, ಅಳಿಯ ಮೆಹಬೂಬ್, ಸಹೋದರ- ಸಹೋದರಿಯರಾದ ಸುಬೈರ್ (ಜಿಲ್ಲಾ ನ್ಯಾಯಾಲಯ ನೌಕರ), ರಸಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ರಮ್ಲತ್ ಈ ಹಿಂದೆ ನಿಧನ ಹೊಂದಿ ದ್ದಾರೆ. ಅಶ್ರಫ್‌ರ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇಂದು ಸಂಜೆ ೪ಕ್ಕೆ ಅತ್ತುಟ್ಟಿ ಮೊಯ್ದೀನ್ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು.

You cannot copy contents of this page